ಉಡುಪಿ, ಸೆ 19 (Daijiworld News/MSP): ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿಯಾಗಿ ಕರಾವಳಿ ಕರ್ನಾಟಕದಲ್ಲಿ ಹುಟ್ಟಿದ ಬ್ಯಾಂಕುಗಳನ್ನು ವಿಲೀನಗೊಳಿಸುವ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
ಕರ್ನಾಟಕದ ಕರಾವಳಿ ಪ್ರದೇಶದ ಬ್ಯಾಂಕುಗಳನ್ನು ಇತರ ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸುವುದರಿಂದ ಅವರ ಹೆಸರಿನೊಂದಿಗೆ ಸಂಸ್ಕೃತಿಯೂ ಶಾಶ್ವತವಾಗಿ ಅಳಿಸಿ ಹೋಗುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಲು ಬ್ಯಾಂಕುಗಳ ವಿಲೀನ ಅತ್ಯಗತ್ಯ ಎಂದು ಇದೇ ವೇಳೆ ನಿರ್ಮಲಾ ಅವರಿಗೆ ತಿಳಿಸಿದರು. ವಿಲೀನ ಯೋಜನೆಗಳನ್ನು ಆಯಾ ಬ್ಯಾಂಕುಗಳ ನಿರ್ದೇಶಕರ ಮಂಡಳಿಗಳು ಅನುಮೋದಿಸದ ಹೊರತು ಸರ್ಕಾರವು ಈ ಪ್ರಸ್ತಾಪದೊಂದಿಗೆ ಮುಂದುವರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭ ಸ್ವಾಮೀಜಿಯವರು , ಐಸ್ ಪ್ಲಾಂಟ್ಗಳ ಮೇಲೆ ಜಿಎಸ್ಟಿ ಹೇರಿದ್ದರಿಂದ ಆಗುತ್ತಿರುವ ತೊಂದರೆ ಬಗ್ಗೆ ಹಾಗೂ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.