ಮಂಗಳೂರು, ಸೆ.19(Daijiworld News/SS): ಮಹಾನಗರ ಪಾಲಿಕೆಯಲ್ಲಿರುವ ನಾಗರಿಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಾ, ಜನಸಾಮಾನ್ಯರಿಗೆ ನ್ಯಾಯಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ಸ್ ಅವರನ್ನು ಇದೀಗ ರಾಷ್ಟ್ರೀಯ ವಾಹಿನಿಯೊಂದು ಅತ್ಯುತ್ತಮ ಜನಪರ ಕಾಳಜಿಯರುವ ವ್ಯಕ್ತಿ ಎಂದು ಗುರುತಿಸಿ, ಅಭಿನಂದಿಸಿದೆ.
ದೇಶದ ಪ್ರಸಿದ್ಧ ವಾಹಿನಿಗಳಲ್ಲಿ ಒಂದಾಗಿರುವ ‘ಮಿರರ್ ನವ್’ ಚಾನೆಲ್ ಜನಪರ ಕಾಳಜಿಯ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುವ, ಸಾಮಾಜಿಕ ಕಾಳಜಿ ಹೊಂದಿರುವ ಒಟ್ಟು ಐದು ಮಂದಿಯನ್ನು ಪುರಸ್ಕಾರಕ್ಕೋಸ್ಕರ ಆಯ್ಕೆ ಮಾಡಿದೆ. ಅವರಲ್ಲಿ ಮಂಗಳೂರಿನ ನಾಗರಿಕ ಹಿತ ವೇದಿಕೆಯ ಸ್ಥಾಪಕಾಧ್ಯಕ್ಷ ಜೆರಾರ್ಡ್ ಟವರ್ಸ್ ಆಯ್ಕೆಯಾಗಿದ್ದಾರೆ. ಈ ಮೂಲಕ ಮಂಗಳೂರಿನ ಹೋರಾಟಗಾರರೊಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹೊಂಡಗುಂಡಿಗೆ ಬಿದ್ದು ದಂಪತಿ ಸಾವನ್ನಪ್ಪಿದ ಘಟನೆ ಕೆಲವು ವರ್ಷಗಳ ಹಿಂದೆ ನಡೆದಿದ್ದು, ಇದಕ್ಕೆ ಬಿಬಿಎಂಪಿಯನ್ನೇ ಹೊಣೆಗಾರರನ್ನಾಗಿ ಮಾಡಿ ದಂಪತಿ ಮನೆ ಮಂದಿಗೆ ಪರಿಹಾರದ ಮೂಲಕ ನ್ಯಾಯಕೊಡಿಸುವಲ್ಲಿ ಟವರ್ಸ್ ಅವರು ‘ಮಿರರ್ ನವ್’ ಚಾನೆಲ್ ಮೂಲಕ ಪ್ರಯತ್ನ ಪಟ್ಟಿದ್ದರು. ಅಷ್ಟೇ ಅಲ್ಲದೇ ದೇಶದಾದ್ಯಂತ ಇರುವ ನೂರಾರು ಸಮಸ್ಯೆಗಳನ್ನು ಕೂಡಾ ಈ ವಾಹಿನಿ ಮೂಲಕ ಸಮಾಜಕ್ಕೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಇದೇ ಕಾರಣಕ್ಕೆ ಇದೀಗ ವಾಹಿನಿ ಇವರನ್ನು ಸುನಿಲ್ ಚಕ್ರವರ್ತಿ, ಪಿಯೂಸ್ ಸಹಾ, ಆಯೂಷ್ ಗುಪ್ತಾ ಮತ್ತು ಆಕಾಂಕ್ಷ ವರ್ಮಾ ಅವರೊಂದಿಗೆ ಗುರುತಿಸಿ ಅಭಿನಂದನೆ ಸಲ್ಲಿಸಿದೆ.
ಇವರು ಎಂಸಿಸಿ ಸಿವಿಕ್ ಗ್ರೂಪ್ನ ಸದಸ್ಯರೂ, ಮಾಹಿತಿ ಹಕ್ಕು ಕಾರ್ಯಕರ್ತರೂ ಆಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ನೂರಾರು ಸಮಸ್ಯೆಗಳ ಬಗ್ಗೆಯೂ ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಹೊಂಡಗುಂಡಿಗಳ ರಸ್ತೆ, ನೀರಿಲ್ಲದೆ ಸಾರ್ವಜನಿಕರು ಕಂಗೆಟ್ಟ ಸಂದರ್ಭ, ಅಕ್ರಮ ಮರಳು ಸಾಗಾಟ, ದಾರಿದೀಪದ ಅವ್ಯವಸ್ಥೆ, ಮೆಸ್ಕಾಂ ಬೇಜವಾಬ್ದಾರಿ ಹೀಗೆ ನೂರಾರು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ಬಗೆಹರಿಸುವಲ್ಲಿ ಶ್ರಮಿಸುತ್ತಿದ್ದಾರೆ.