ಕುಂದಾಪುರ,ಸೆ 19 (Daijiworld News/MSP): ಸ್ವಚ್ಛ ಭಾರತ ಅಭಿಯಾನಕ್ಕೆ ಈಗಾಗಲೇ ಐದು ವರ್ಷ ಕಳೆದಿದೆ. ಆದರೆ ಪೋಟೋಕ್ಕಾಗಿ ಸ್ವಚ್ಛತೆ ಮಾಡುವ ನಮ್ಮ ಜನಕ್ಕೆ ಮಾದರಿಯಾಗಿ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಸ್ವಚ್ಛತೆ ಮಾಡುವ ಮೂಲಕ ಕನ್ನಡಿ ಹಿಡಿದಿದ್ದಾರೆ. ಕುಂದಾಪುರದ ವಡೇರಹೋಬಳಿಯ ಚೈತನ್ಯ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಶಿಕ್ಷಕ ವೃಂದದ ಜೊತೆಗೆ ಸ್ವಚ್ಛತೆಗಾಗಿ ಕುಂದಾಪುರದ ಬೀದಿಗಿಳಿದಿದೆ.
ಗುರುವಾರ ಬೆಳಿಗ್ಗೆ 11 ಗಂಟೆಗೆ ಕುಂದಾಪುರದ ಓವರ್ ಬ್ರಿಡ್ಜ್ ಬಳಿಯ ಮಣ್ಣಿನ ರಾಶಿಯ ಬಳಿ ಕಸ ಹೆಕ್ಕುವ ಅಭಿಯಾನ ಮಾಡುವ ಮೂಲಕ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ಬಿಸಿ ಮುಟ್ಟಿಸಿದ್ದಾರೆ. ನಮ್ಮನ್ನು ನೋಡಿಯಾದರೂ ಕಲಿಯಿರಿ. ಇನ್ನಾದರೂ ತ್ಯಾಜ್ಯ ಎಸೆಯಬೇಡಿ. ಎಸೆದ ತ್ಯಾಜ್ಯವನ್ನು ವಿಲೇವಾರಿ ಮಾಡಿ ಎನ್ನುವ ಸಂದೇಶಗಳೊಂದಿಗೆ ಚೈತನ್ಯ ಶಾಲೆಯ ವಿಶೇಷ ಮಕ್ಕಳು ಕಸ ತೆಗೆಯುವ ಕಾಯಕ ನಡೆಸಿದ್ದಾರೆ.
ಈ ಸಂದರ್ಭ ಮಾತನಾಡಿದ ಚೈತನ್ಯ ಶಾಲೆಯ ಮ್ಯಾನೇಜಿಂಗ್ ಟ್ರಸ್ಟೀ ಶೋಭಾ ಸೋನ್ಸ್, ಅಭಿಯಾನದಿಂದ ಎಷ್ಟು ಅಭಿವೃದ್ಧಿ ಆಗುತ್ತದೆ ಎನ್ನುವುದು ಮುಖ್ಯವೋ ಅದೇ ರೀತಿ ತ್ಯಾಜ್ಯ ವಿಲೇವಾರಿಯ ಬಗ್ಗೆ ಸಾರ್ವಜನಿಕರಲ್ಲಿ ಮನವರಿಕೆ ಮಾಡುವುದು ಮುಖ್ಯ. ತ್ಯಾಜ್ಯ ಎಸೆಯದಂತೆ ಸಾರ್ವಜನಿಕರು ಗಮನಹರಿಸಿದರೆ ಸ್ವಚ್ಛತೆ ಸುಲಭ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುವುದರಿಂದ ಸ್ವಚ್ಛತೆಯೂ ನಮ್ಮ ಕೈಯಲ್ಲಿಯೇ ಇದೆ. ಸಾಂಕೇತಿಕವಾಗಿ ಶಾಲೆ ವಿಶೇಷ ಮಕ್ಕಳು ಸಾರ್ವಜನಿಕರಿಗೆ ಮನವೊಲಿಕೆಯ ಕೆಲಸ ಮಾಡಿದ್ದಾರೆ. ಮುಮದಿನ ದಿನಗಳಲ್ಲಿ ಶಾಲೆಯ ಸಿಬ್ಬಂದಿಗಳು ಸ್ವಚ್ಛತೆ ಅಭಿಯಾನ ಮುಂದುವರೆಸಲಿದ್ದೇವೆ ಎಂದರು. ಈ ಅಭಿಯಾನಕ್ಕೆ ಮಹಿಳಾ ಸಮಾಜ ಕುಂದಾಪುರ ವಡೇರ ಹೋಬಳಿ ಕೈ ಜೋಡಿಸಿತ್ತು. ನೂತನ ನಾಗರಾಜ, ಸುಜಾತ, ವೀಣಾ ಕೋಟ್ಯಾನ್, ಸುಪ್ರಭಾ ಚಾತ್ರ, ರೇಖಾ ರಾಮಚಂದ್ರ. ಮುಖ್ಯೋಪಾದ್ಯಾಯಿನಿ ಲೀಲಾ ಕಾರ್ಕಡ, ದಿನೇಶ್ ಗೋಡೆ ಹಾಗೂ ಬಾರ್ಕೂರಿನ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡರು.