ಭಟ್ಕಳ ಸೆ14 : ನಗರಸಭೆ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಓರ್ವ ಅಂಗಡಿಕಾರ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಅಂಗಡಿಕಾರ ರಾಮಚಂದ್ರ ನಾಯ್ಕ ಆತ್ಮಹತ್ಯೆಗೆ ಯತ್ನಿಸಿದವನು. ಇಂದು ಬೆಳಿಗ್ಗೆ 6:30ರ ಸುಮಾರಿಗೆ ಪುರಸಭೆ ಕಾರ್ಯಾಲಯದೊಳಗೆ ಅಧಿಕಾರಿಗಳು ಅಂಗಡಿ ತೆರವುಗೊಳಿಸಲು ಮುಂದದಾಗ ಈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದನ್ನು ತಪ್ಪಿಸಲು ಹೋದ ಇನ್ನೋರ್ವ ಈಶ್ವರ ನಾಯ್ಕ ಎಂಬಾತನಿಗೂ ಸಹ ಬೆಂಕಿಯ ಕೆನ್ನಾಲಿಗೆ ತಗುಲಿದೆ.ಇಬ್ಬರಿಗೂ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ರವಾನೆ ಮಾಡಲಾಗಿದೆ.
ಘಟನೆಯಿಂದ ಅಂಗಡಿಕಾರರು ಆಕ್ರೋಶ ಭರಿತರಾಗಿದ್ದು, ಸ್ಥಳದಲ್ಲಿ ಸಂಪೂರ್ಣ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.ಇನ್ನು ಕಲ್ಲು ತೂರಾಟ ಘಟನೆಯೂ
ನಡೆದಿದೆ .ಹೀಗಾಗಿ ಸ್ಥಳದಲ್ಲೇ ಮೊಕ್ಕಾಂ ಡಿಸಿ ನಕುಲ್ ಹೂಡಿದ್ದಾರೆ.ಇದರೊಂದಿಗೆ ಬಿಗಿ ಪೋಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ..ನಗರದಲ್ಲಿರುವ 106 ಮಳಿಗೆಗಳು ಹರಾಜಾಗಿತ್ತು. ಈ ಪೈಕಿ ಹರಾಜು ಆಗಿದ್ದರೂ ತೆರವುಗೊಳಿಸಲು ಒಪ್ಪದ ಕೆಲವು ವ್ಯಾಪಾರಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಇಂದು ಆಗಮಿಸಿದ್ದರು.