ಬಂಟ್ವಾಳ, ಡಿ 30: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಬಿ.ಜನಾರ್ದನ ಪೂಜಾರಿ ಅವರ ಮೇಲೆ ನನಗೆ ಅಪಾರ ಗೌರವವಿದೆ. ಪೂಜಾರಿಯವರ ಕುರಿತು ನಾನು ಏನೂ ಮಾತನಾಡಿಲ್ಲ ಎಂದು ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ಕಾಂಗ್ರೆಸ್ ಕಚೇರಿ ಬಳಿ ಮಾತನಾಡಿದ ಅವರು, ಪೂಜಾರಿ ಅವರ ಮೇಲೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ. ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಪೂಜಾರಿಯವರನ್ನು ಭೇಟಿಯಾಗಿ ಅವರ ಜೊತೆ ಮಾತನಾಡಿದ್ದೇನೆ. ಪೂಜಾರಿಯವರ ವಿರುದ್ಧವಾಗಿ ನಾನು ಏನೂ ಮಾತನಾಡಿಲ್ಲ. ಕೆಲವರಿಂದ ಅವರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ನಾನು ಪೂಜಾರಿಯವರನ್ನು ಬೈದಿರುವ ವಿಡಿಯೋ ಏಲ್ಲಿದೆ..? ಅವರಿಗೆ ನಾನು ಬೈದಿಲ್ಲ. ತಪ್ಪಾಗಿ ಅವರು ಅರ್ಥ ಮಾಡಿಕೊಂಡರೆ ದೇವರು ನೋಡಿಕೊಳ್ಳಲಿ. ಇವೆಲ್ಲಾ ಅವರ ಮತ್ತು ನನ್ನ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸಲು ಮಾಡಿದ ಹುನ್ನಾರ ಎಂದರು.