ಬೆಳ್ತಂಗಡಿ, ಸೆ 19 (DaijiworldNews/SM): ಉಜಿರೆ ಗ್ರಾಮದ ದೂಜಿರಿಗೆ ಎಂಬಲ್ಲಿ ಸೆ.18ರಂದು 51.730 ಕೆ.ಜಿ. ಆನೆದಂತ ಪತ್ತೆ ಪ್ರಕರಣ, ಮೂವರ ಬಂಧನ ಹಾಗೂ ಒಂದು ಡಿಬಿಬಿಎಲ್ ಕೋವಿ, ಪರವಾನಿಗೆ ಪುಸ್ತಕ, ಎಂಟು ಜೀವಂತ ಗುಂಡುಗಳನ್ನು ಪತ್ತೆಹಚ್ಚಿರುವುದು ಇದು ರಾಜ್ಯದಲ್ಲೇ ಅತೀದೊಡ್ಡ ಪ್ರಕರಣವಾಗಿದ್ದು ಇದನ್ನು ಪತ್ತೆಹಚ್ಚಿದ ತಂಡಕ್ಕೆ ಪ್ರಶಸ್ತಿ ನೀಡಲಾಗುವುದು ಎಂದು ಸಿಐಡಿ ಅರಣ್ಯ ಘಟಕ ಮಡಿಕೇರಿ ಪೋಲೀಸ್ ಅಧೀಕ್ಷ ಸುರೇಶ್ ಬಾಬು ಹೇಳಿದ್ದಾರೆ.
ಅವರು ಗುರುವಾರ ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸುಮಾರು ೩ವರ್ಷಗಳ ಹಿಂದಿನಿಂದ ಈ ದಂತವನ್ನು ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿರಬಹುದು ಎಂದು ಶಂಕಿಸಲಾಗಿದೆ. ಈಗಾಗಲೇ ಉಜಿರೆ ದೂಜರಿಗೆ ನಿವಾಸಿ ಎಂ.ಎ. ಅಬ್ರಹಾಂ, ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬು ತಾಲೂಕಿನ ವೆಲ್ಲಾಡ್ ಮನಕ್ಕಳ ಕೊರಕ್ಕಾಡು ನಿವಾಸಿ ಸುರೇಶ್ ಬಾಬು ಮತ್ತು ಹಾಸನ ಅಂಕಪುರ ಕಚಾಯ ಹೋಬಳಿ ಕಬ್ಬತ್ತಿ ಕ್ರಾಸ್ ನಿವಾಸಿ ರಮೇಶ್ ಕೆ.ಜಿ. ಎಂಬವರನ್ನು ಬಂಧಿಸಿದ್ದು ಇವರೊಂದಿಗೆ ವ್ಯವಹಾರ ಮಾಡಲು ಬಂದಿದ್ದ ಅನ್ವರ್ ಮಂಗಳೂರು ಎಂಬಾತ ತಪ್ಪಿಸಿಕೊಂಡಿದ್ದಾನೆ.
ಇದೊಂದು ಅತೀ ಸೂಕ್ಷ್ಮ ಪ್ರಕರಣವಾಗಿದ್ದು ನಮ್ಮ ತಂಡವು ಇದನ್ನು ಅತ್ಯಂತ ವ್ಯವಸ್ಥಿತವಾಗಿ ಪತ್ತೆಹಚ್ಚಲು ಯಶಸ್ವಿಯಾಗಿದೆ. ಕೆಲವೊಂದು ಮಾಹಿತಿಗಳು ಇದ್ದರೂ ಇವರ ಚಲನವಲನಗಳ ಬಗ್ಗೆ ನಿಗಾ ಇಡಲು ನಮ್ಮ ತಂಡವು ಹಲವಾರ ಸಮಯಗಳಿಂದ ಶ್ರಮಿಸಿದ್ದು ಕೊನೆಗೂ ಉಜಿರೆಯಲ್ಲಿ ದಂತ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.