ಮಂಗಳೂರು, ಸೆ 20 (Daijiworld News/RD): ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ ಎಲ್ಲೆಡೆ ಸಂಚಲನ ಮೂಡಿಸಿತ್ತು. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಹಾಗೂ ಈ ರೀತಿಯ ದುರ್ಘಟನೆಗಳನ್ನು ತಡೆಯಲು ಸಾಧನವೊಂದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ರೂಪಿಸುತ್ತಿದೆ.
ಈಗಾಗಲೇ ಬೋಟ್ ಗಳಲ್ಲಿ ಅವಳವಡಿಸಿರುವ ಟ್ರಾನ್ಸ್ಪಾಂಡರ್ನಿಂದ ಅಪಾಯ ಸಂಭವಿಸಿದ ಬಳಿಕ ಮಾತ್ರ ಮಾಹಿತಿ ಪಡೆಯುವ ಅವಕಾಶವಿದ್ದು, ಆದರೆ ಇಸ್ರೋ ರೂಪಿಸುತ್ತಿರುವ ನೂತನ ಸಾಧನದ ಮೂಲಕ ಅಪಾಯದಲ್ಲಿರುವ ದೋಣಿಯ ಕ್ಷಣ ಕ್ಷಣದ ಮಾಹಿತಿ ಪಡೆಯಲು ಸಾಧ್ಯ. ಮೀನುಗಾರರ ಜತೆಗೆ ನೇರ ಸಂಪರ್ಕ ಇದರಿಂದ ಸಾಧ್ಯವಾಗಲಿದ್ದು, ಉಪಗ್ರಹದ ಮೂಲಕ ಸೂಚನೆ ಲಭಿಸಿದ ಬಳಿಕ ತ್ವರಿತಗತಿಯಲ್ಲಿ ಕಾರ್ಯಾಚರಣೆಗಿಳಿಯಲು ಅನುಕೂಲ ಮಾಡಿಕೊಡುತ್ತದೆ. ಈಗಿರುವ ಸಾಧನದ ಮೂಲಕ ಅಪಾಯ ಸಂಭವಿಸಿದ ಬಳಿಕ ಮಾತ್ರ ಮಾಹಿತಿ ಪಡೆಯುವ ಅವಕಾಶವಿದ್ದು, ಆಳ ಸಮುದ್ರದಲ್ಲಿ ಬೋಟ್ ನಾಪತ್ತೆಯಾದರೆ, ಅವಘಡಗಳಲ್ಲಿ ಸಿಲುಕಿಕೊಂಡರೆ, ಅನಾಹುತ ಸಂಭವಿಸಿದರೆ ಉಪಗ್ರಹಗಳ ಮೂಲಕ ಮಾಹಿತಿ ಪಡೆದು ಕ್ಷಿಪ್ರ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
ಸದ್ಯ ಇರುವ ಟ್ರಾನ್ಸ್ಪಾಂಡರ್ ಮೂಲಕ ದೋಣಿಯು ಅವಘಡಕ್ಕೆ ಸಿಲುಕಿದೆ ಎಂಬಿಷ್ಟೇ ಮಾಹಿತಿ ಕೋಸ್ಟ್ಗಾರ್ಡ್ ನಿಯಂತ್ರಣ ಕೊಠಡಿಗೆ ಸಿಗುತ್ತದೆ. ಇಲ್ಲಿಂದ ಹೆಚ್ಚುವರಿ ಮಾಹಿತಿಯನ್ನು ಕೇಳಿಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಸ್ರೋ ಪರಿಚಯಿಸಿದ ನೂತನ ಉಪಕರಣದಿಂದ ಇಮ್ಮುಖ ಸಂವಹನ ಸಾಧ್ಯವಾಗುತ್ತದೆ. ಹೀಗಾಗಿ ಹೆಚ್ಚುವರಿ ಮಾಹಿತಿ ಸಂಗ್ರಹಿಸಿ ನಿಖರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲು ಅನುಕೂಲವಾಗುತ್ತದೆ. ಈ ಸಂವಹನ ಕ್ರಿಯೆಯು ಉಪಗ್ರಹ ಸಂಪರ್ಕದ ಮೂಲಕ ಕಾರ್ಯಾಚರಿಸುತ್ತದೆ.
ಈಗಾಗಲೇ ರಕ್ಷಣೆಗೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಬೋಟ್ಗಳು ಕಡ್ಡಾಯವಾಗಿ ಎಐಎಸ್ ಟ್ರಾನ್ಸ್ಪಾಂಡರ್ ಅಳವಡಿಸಬೇಕು ಎಂದು ಮೀನುಗಾರಿಕೆ ಇಲಾಖೆ ಆದೇಶಿಸಿದ್ದು, ಬೋಟ್ಗೆ ಏನು ಸಮಸ್ಯೆ ಎದುರಾಗಿದೆ, ಅದು ಯಾವ ಸ್ಥಳದಲ್ಲಿದೆ ಎಂಬ ಮಾಹಿತಿ ಇದರಿಂದ ತಿಳಿಯುತ್ತದೆ.