ಮಂಗಳೂರು,ಸೆ 20(Daijiworld News/RD): ಹೆಣ್ಣಿನ ಸೌಂದರ್ಯ ಕೇಶದಲ್ಲಿ ಅಡಕವಾಗಿರುತ್ತದೆ. ಅದರಂತೆ ನೀಲ ಕೇಶಕ್ಕಾಗಿ ಹೆಣ್ಮಕ್ಕಳು ಸಾಕಷ್ಟು ಕಸರತ್ತು ಮಾಡುವ ಮೂಲಕ ಆರೈಕೆ ಮಾಡುತ್ತಾರೆ. ಆದರೆ ಇಲ್ಲೊಬ್ಬರು ವಿದ್ಯಾರ್ಥಿನಿ ತನ್ನ ಕೇಶವನ್ನೇ ದಾನ ಮಾಡಿ ಇತರರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಈ ಮೂಲಕ ಸಮಾಜ ಸೇವೆಗೈದು ಮಾನವೀಯತೆ ಮೆರೆದಿದ್ದಾರೆ ನಗರದ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಬಿಎಎಲ್ಎಲ್ಬಿ ವಿದ್ಯಾರ್ಥಿನಿ ಪವಿತ್ರಾ ಶೆಟ್ಯೆ.
ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರ್ ನವರಾದ ಪವಿತ್ರಾ. ಕೆಲವು ದಿನಗಳ ಹಿಂದೆ ಅವರು, ಅನಾರೋಗ್ಯದ ಹಿನ್ನಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ವೈದ್ಯರು ಕೆಲವು ಹೊತ್ತು ಹೊರಭಾಗದಲ್ಲಿ ಕಾಯುವಂತೆ ತಿಳಿಸಿದ್ದರು. ವೈದ್ಯರ ಸಲಹೆಯಂತೆ ಹೊರಭಾಗದಲ್ಲಿ ಕುಳಿತ ಪವಿತ್ರ ಆ ಸಂದರ್ಭದಲ್ಲಿ ಕಿಮೋ ಥೆರಪಿಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಪವಿತ್ರಾ ಅವರನ್ನು ನೋಡಿ ’ಅಕ್ಕ ನಿಮ್ಮ ಕೂದಲು ತುಂಬಾ ಚೆನ್ನಾಗಿದೆ’ ಎಂದು ಮುಟ್ಟಿದರು, ಈ ವೇಳೆ ಅವರ ಮುಖದಲ್ಲಿ ಮೂಡಿದ ಮಂದಹಾಸವನ್ನು ಕಂಡು ಅಸಹಾಯಕತೆಯ ಭಾವನೆಯಿಂದ ಪವಿತ್ರಾ ಬಳಿಕ ಕ್ಯಾನ್ಸರ್ ಸೇವಾ ಸಂಸ್ಥೆಯೊಂದನ್ನು ಸಂಪರ್ಕಿಸಿ ಕೇಶದಾನ ಮಾಡುವ ಬಗ್ಗೆ ಚರ್ಚಿಸಿ ತಮ್ಮ 18 ಇಂಚು ಉದ್ದದ ಕೂದಲನ್ನು ದಾನ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪವಿತ್ರ, ಕೇಶ ಹೆಣ್ಮಕ್ಕಳ ಸೌಂದರ್ಯವನ್ನು ಇಮ್ಮಡಿಗೊಳಿಸುವ ಸಾಧನವಾಗಿದ್ದು, ಆದರೆ ನನಗೆ ಆ ಮಕ್ಕಳನ್ನು ನೋಡಿ ನನ್ನ ಸೌಂದರ್ಯಕ್ಕಿಂತ, ಮಕ್ಕಳ ಮುಗ್ದ ಮುಖದ ನಗುವೇ ಮಿಗಿಲೆಂದೆನಿಸಿತು, ತಾಯಿಯೊಂದಿಗೆ ಮಾತನಾಡಿ ಕೇಶದಾನ ಮಾಡಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕಾಗಿದೆ ಎಂದರು.
ಈಗಾಗಲೇ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಹೆಣ್ಮಕ್ಕಳು ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ್ದಾರೆ. ಕ್ಯಾನ್ಸರ್ ಪೀಡಿತರಿಗಾಗಿ ಕೇಶ ಸಂಗ್ರಹಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ಸಂಸ್ಥೆಯ ಮೂಲಕ ಕೇಶದಾನ ಮಾಡಲಾಗಿದೆ. ಜೊತೆಗೆ ಅವರಿಗಾಗಿಯೇ ಕೃತಕ ಕೂದಲನ್ನು ತಯಾರಿಸಿ ಕೊಡಲಾಗುತ್ತಿದ್ದು, ಅದಕ್ಕಾಗಿ ಕೇಶದಾನದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಸಂಘ ಸಂಸ್ಥೆಗಳು ಕಾರ್ಯಚರಿಸುತ್ತಿವೆ.