ಮೂಡಬಿದಿರೆ, ಡಿ 30: ಮನೆಯವರಿಗೆ ಆಹಾರದಲ್ಲಿ ಅಮಲು ವಸ್ತು ಹಾಕಿ, ಮದುವೆಯ ಹಿಂದಿನ ದಿನ ನಾಪತೆಯಾಗಿ ಜೈಲು ಸೇರಿದ್ದ ದರೆಗುಡ್ಡೆಯ ನಿವಾಸಿ ಪ್ರಿಯಾಂಕಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಡಿ.11ರಂದು ಪ್ರಿಯಾಂಕಾ ಅವರ ಮದುವೆ ನಿಗದಿಯಾಗಿತ್ತು. ಡಿ.9ರಂದು ಮನೆಯಲ್ಲಿ ಮೆಹಂದಿ ಕಾರ್ಯಕ್ರಮವಿತ್ತು. ಆದರೆ ಡಿ. 8ರಂದು ರಾತ್ರಿ ಮನೆಯವರು ಊಟ ಮಾಡಿ ಮಲಗಿದ್ದ ವೇಳೆ ಪ್ರಿಯಾಂಕಾ ಮನೆಯವರಿಗೆ ಚಳ್ಳೆ ಹಣ್ಣು ತಿನ್ನಿಸಿ ನಾಪತ್ತೆಯಾಗಿದ್ದರು. ಚಿನ್ನಾಭರಣ ಹಾಗೂ ಬಟ್ಟೆ ಬರೆಗಳೊಂದಿಗೆ ನಾಪತ್ತೆಯಾಗಿದ್ದ ಪ್ರಿಯಾಂಕ ಬಗ್ಗೆ ಡಿ. 9ರಂದು ದೂರು ದಾಖಲಾಗಿತ್ತು. ಪಣಂಬೂರು ಮತ್ತು ಮೂಡುಬಿದಿರೆ ಪೊಲೀಸರ ತನಿಖಾ ತಂಡವು ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರನನ್ನು ಮುಂಬೈಯಲ್ಲಿ ಪತ್ತೆ ಹಚ್ಚಿ ಮಂಗಳೂರಿಗೆ ಕರೆ ತಂದಿದ್ದರು. ಆದರೆ ಮನೆಯವರಿಗೆ ಆಹಾರದಲ್ಲಿ ಅಮಲು ವಸ್ತು ಹಾಕಿದ ಆರೋಪದಲ್ಲಿ ಪ್ರಿಯಾಂಕ ಜೈಲು ಸೇರಿದ್ದರು.
ಇದೀಗ ಮೂಡುಬಿದಿರೆ ದರೆಗುಡ್ಡೆಯ ನಿವಾಸಿ ಪ್ರಿಯಾಂಕಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಜೈಲಿನಿಂದ ಹೊರ ಬಂದ ಪ್ರಿಯಾಂಕ ಮನೆಯವರೊಂದಿಗೆ ಮನೆಗೆ ತೆರಳಲು ನಿರಾಕರಿಸಿದ್ದರು. ಆದರೆ ಬಲವಂತವಾಗಿ ಮನೆಯವರು ಪ್ರಿಯಾಂಕಾ ಅವರರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.