ಮಂಗಳೂರು, ಸೆ 20(Daijiworld News/RD): ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಉಳ್ಳಾಲ ಉಳಿಯ ಪರಿಸರದ ನಿವಾಸಿಗಳು ಮನವಿ ಪತ್ರವನ್ನು ಜಿಲ್ಲಾಧಿಕಾರಿಯವರಿಗೆ ನೀಡಿದರು ಶ್ರೀಮತಿ ಎಂ,ಜೆ ರೂಪಾ (ಅಪರ ಜಿಲ್ಲಾಧಿಕಾರಿ)ಸ್ವೀಕರಿಸಿದರು.
ಕಳೆದ ಹಲವು ವರುಷಗಳಿಂದ ನಿರಂತರ ಚಟುವಟಿಕೆಗಳ ಮೂಲಕ ಜನಜಾಗೃತಿ ಮೂಡಿಸುತ್ತಾ ಬಂದಿರುವ ಸಮಿತಿಯು ಈ ಹಿಂದೆಯೂ ಕೂಡ ಸಾರ್ವಜನಿಕ ಸಹಿ ಸಂಗ್ರಹದೊಂದಿಗೆ ಸ್ಥಳೀಯ ನಗರಸಭಾ ಮುಖ್ಯಸ್ಥರಿಗೆ ಮನವಿ ನೀಡಿದ್ದರು, ಇದರಿಂದ ಯಾವುದೇ ಪರಿಣಾಮಕಾರಿ ಹಾಗೂ ಪ್ರಯೋಜನಕಾರಿ ಬೆಳವಣಿಗೆ ಆಗಲಿಲ್ಲ,ಬದಲಾಗಿ ನದಿ ಪರಿಸರ ಅತ್ಯಂತ ಮಲಿನಕಾರಿಯಾಗಿ ಮಾರ್ಪಾಡಾಗುವುದನ್ನು ಗಂಭೀರವಾಗಿ ಕಂಡು ಉನ್ನತ ಮಟ್ಟದ ಹೋರಾಟಕ್ಕೆ ಸ್ಥಳೀಯ ನಿವಾಸಿಗಳು ಮುಂದಾಗಿದ್ದಾರೆ.
ಈ ಪ್ರಯುಕ್ತ ರಾಮಕೃಷ್ಣ ಮಠದ ಆಶ್ರಯದಲ್ಲಿ ಕಾರ್ಯಾಚರಿಸುವ ಸ್ವಚ್ಛ ಮಂಗಳೂರು ವಿಭಾಗದ ಮುಖ್ಯಸ್ಥರನ್ನು ಸ್ಥಳೀಯರು ಆಶ್ರಯಿಸಿದ್ದಾರೆ, ಜನರ ಜೀವನೋಪಾಯಕ್ಕೆ ಪೂರಕವಾಗಿದ್ದ ನದಿ, ಮಾಲಿನ್ಯವನ್ನು ತುಂಬಿಕೊಂಡು ಜೀವ ಸಂಕುಳಕ್ಕೆ ಮಾರಕವಾಗುತ್ತಿದೆ, ಪರಿಣಾಮ ಪರಿಸರಮಾಲಿನ್ಯ ಸಂಬಂಧಿ ರೋಗಕ್ಕೆ ಬಲಿಯಾಗಿ ಬಾಲಕನೋರ್ವನು ಅಸುನೀಗಿರುತ್ತಾನೆ,ನಿತ್ಯ ದುರ್ನಾತದಿಂದಾಗಿ ಜನರ ಮಾನಸಿಕ ನೆಮ್ಮದಿಗೆ ಘಾಸಿ ಉಂಟುಮಾಡುತ್ತಿವೆ, ಉಳ್ಳಾಲ ನಗರಸಭಾ ವ್ಯಾಪ್ತಿಗೆ ಒಳಪಟ್ಟ ನೇತ್ರಾವತಿ ನದಿಯ ಪ್ರಸ್ತುತ ಶಾಖೆಗಳು ಉಳಿಯ, ಹೊಯಿಗೆ, ಮಾರ್ಗತ್ತಲೆ, ಕಟ್ಟತ್ತಲೆ, ಕಕ್ಕೆತೋಟ, ಪಾಂಡೆಲ್ಪಕ್ಕ, ಕೊಟ್ಟಾರ, ಉಪ್ಪುಗುಡೆ, ಕೋಡಿ, ಹಾಗೂ ಕೋಟೆಪುರ ಮುಂತಾದ ಕೆಲವು ಪ್ರಮುಖ ಜನವಾಸ ಕೇಂದ್ರಗಳನ್ನು ಹಾದುಹೋಗುತ್ತವೆ.
ನದಿ ನೀರಿನೊಂದಿಗೆ ಕಲುಷಿತ ನೀರು ಮಿಶ್ರಣಗೊಂಡು ಸಾಂಕ್ರಾಮಿಕ ರೋಗ ಉತ್ಪತ್ತಿ ಮಾಡುತ್ತಿವೆ ಅಲ್ಲದೇ ನದಿ ನೀರಿನ ಸರಾಗ ಹರಿಯುವಿಕೆಯ ತೊಡಕಿನಿಂದಾಗಿ ಹಲವು ಸಮಸ್ಯೆಗಳನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ. ನೀರಿನ ಸಹಜ ಹರಿಯುವಿಕೆಗೆ ಅತೀ ಮಾರಕವಾಗಿರುವ ಅವ್ಶೆಜ್ಞಾನಿಕ ಕಿರುಸೇತುವೆ (ವಾರ್ಡ್ ಸಂಖ್ಯೆ ೫) ತೆರೆವು ಗೊಳಿಸದೇ ಇದ್ದಲ್ಲಿ ಈ ಪ್ರಕರಣ ಇನ್ನಷ್ಟೂ ಉಲ್ಭನ ಗೊಳ್ಳಲಿದೆ, ಎಂದು ಪರಿಸರ ತಜ್ಞರುಗಳ ಸಹಿತ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಪ್ರಸ್ತುತ ಕಿರುಸೇತುವೆಯು ವಿಶಾಲವಾದ ನದಿಯ ನೀರು ಹರಿಯುವಿಕೆಗೆ ಕಂಟಕವಾಗಿದೆ. ಇದರ ಜತೆಯಲ್ಲೇ ಸಾರ್ವಜನಿಕ ರಸ್ತೆಗೆ ಅಲ್ಲದೇ ನದಿಪಾತ್ರದಲ್ಲಿ ಮಣ್ಣುತುಂಬಿಸಿ ಅನಧಿಕೃತ ಜಾಗದ ಒತ್ತುವರಿ ಯಥೇಚ್ಛವಾಗಿ ನಡೆಯುತ್ತಿದೆ ಎಂದು ಸಮಿತಿಯು ದೂರನ್ನು ಸಲ್ಲಿಸಿದೆ, ನದಿಯನ್ನು ಉಳಿಸಲು ನದಿ ನೈಮರ್ಲೀಕರಣ ಕಾರ್ಯಕ್ರಮವು ಸರಕಾರಿ ಪ್ರಾಯೋಜಕತ್ವದಲ್ಲಿ ಕೂಡಲೇ ಆಗಬೇಕಾಗಿದೆ.
ಈ ಮೂಲಕ ಕಾಂಡ್ಲ ಗಿಡಗಳ ಹೊರತಾಗಿ ಅನೈಸರ್ಗಿಕವಾಗಿ ಬೆಳೆದಿರುವ ನಿರುಪಯುಕ್ತ ಮರಗಿಡಗಳನ್ನು ಕಡಿದು ಹರಿಯುವಿಕೆಗೆ ಅನುಕೂಲ ಕಲ್ಪಿಸಬೇಕಾಗಿದೆ, ನದಿ ಪಾತ್ರದಲ್ಲಿ ವಾಸವಿರುವ ಮನೆಗಳಿಂದ ಹಾಗೂ ನಗರದ ಕಟ್ಟಡಗಳಿಂದ ಮಲಿನನೀರು ನದಿಗೆ ಹರಿಯ ಬಿಡದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ನದಿಗೆ ಕಸಗಡ್ಡಿಗಳನ್ನು ಹಾಗೂ ಮಾಂಸದಂಗಡಿಯ ತ್ಯಾಜವನ್ನು ಎಸೆಯುದರ ಬಗ್ಗೆ ಮುನ್ನೆಚ್ಚರಿಕೆಯ ಕ್ರಮ ವಹಿಸಬೇಕು. ಈಗಾಗಲೇ ಕೆಸರಿನೊಂದಿಗೆ ಕೊಳೆತು ಗುಡ್ಡ ಕಟ್ಟಿರುವ ತ್ಯಾಜವನ್ನು ತೆಗೆಯಲು ನದಿಯಿಂದ ಹೂಳೆತ್ತುವ ಕಾರ್ಯವೂ ಜಾರಿಯಾಗಬೇಕು, ಮುಂತಾದ ಪ್ರಮುಖ ಅವಶ್ಯಕತೆಗಳನ್ನು ಮುಂದಿಟ್ಟುಕೊಂಡು ಉನ್ನತ ಮಟ್ಟದಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಪರಿಸರ ಸಂರಕ್ಷಣಾ ಸಮಿತಿಯು ಮನವಿ ಪತ್ರದ ಜತೆಗೆ ಸಾರ್ವಜಿನಿಕ ಸಹಿ ಸಂಗ್ರಹದ ಪ್ರತಿಗಳನ್ನು ದ.ಕ. ಜಿಲ್ಲಾಧಿಕಾರಿಗಳು,ಪರಿಸರ ಇಲಾಖೆ ನಿರ್ದೇಶಕರು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳಿಗೆ ಹಸ್ತಾಂತರಿಸಿ, ಮಾತುಕತೆ ನಡೆಸಿದರು, ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಲ್ಲಿ ಸರಕಾರಿ ಇಲಾಖೆಗಳು ಪರಿಣಾಮಕಾರಿಯಾಗಿ ಸ್ಪಂದಿಸುವುದಾಗಿ ಭರವಸೆಯನ್ನಿತ್ತರು.
ಜೊತೆಗೆ ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕರಾದ ಡಾ|| ದಿನೇಶ್ ಕುಮಾರ್ ವೈ.ಕೆ. ಯವರನ್ನು ನಾಗರಿಕ ಪ್ರತಿನಿಧಿನಿಗಳು ಭೇಟಿ ಮಾಡಿ, ಮನವಿ ಪತ್ರವನ್ನು ಹಸ್ತಾಂತರಿಸಿದರು. ಈ ಸಂಧರ್ಭ ರಾಮಕೃಷ್ಣ ಮಠ ಸ್ವಚ್ಛ ಮಂಗಳೂರು ವಿಭಾಗದ ಮುಂದಾಳುಗಳಾದ ಶ್ರೀ ಸುರೇಶ್ ಶೆಟ್ಟಿ, ಶ್ರೀ ವಿಠಲದಾಸ ಪ್ರಭು, ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ, ಉಳಿಯ ಉಳ್ಳಾಲ, ಸಮಿತಿಯ ಜನಪ್ರತಿನಿಧಿಗಳಾದ ಶ್ರೀ ಸುರೇಶ್ ಜನಾರ್ಧನ, ಶ್ರೀ ಅರುಣ್ ಡಿಸೋಜ, ಶ್ರೀ ಲೋಯೆಡ್ ಆರ್ ಡಿಸೋಜ ಹಾಗೂ ಶ್ರೀ ಮಂಗಳೂರ ರಿಯಾಜ್ ಉಪಸ್ಥಿತರಿದ್ದರು.