ಮಂಗಳೂರು, ಸೆ.21(Daijiworld News/SS): ಇದೇ ಸೆ. 28ರಿಂದ ಮಂಗಳೂರು ಮಹಾನಗರದಲ್ಲಿ ನವರಾತ್ರಿ ಹಬ್ಬದ ಆಚರಣೆಗಳು ಪ್ರಾರಂಭವಾಗಲಿದ್ದು, ವಿವಿಧ ಸೇವಾ ಸಮಿತಿಗಳಿಂದ ಹಲವೆಡೆ ಸಾರ್ವಜನಿಕ ಶಾರದಾ ಮಹೋತ್ಸವಗಳು ನಡೆಯಲಿವೆ. ಈ ಹಿನ್ನಲೆಯಲ್ಲಿ, ನವರಾತ್ರಿ ಉತ್ಸವಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಲು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಾರಿ ಮಂಗಳೂರು ದಸರಾವನ್ನು ಅತ್ಯುತ್ತಮವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಶಾಸಕ ಕಾಮತ್ ನಿರ್ಧರಿಸಿದ್ದು, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಮೈಸೂರಿನಂತೆ ಆದ್ದೂರಿಯಾಗಿ ಇಲ್ಲಿ ಕೂಡ ಮಂಗಳೂರು ದಸರಾ ಉತ್ಸವವನ್ನು ಆಚರಿಸಲಾಗುತ್ತದೆ. ಅದೇ ರೀತಿಯಲ್ಲಿ ವಿವಿಧ ದೇವಿ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಯಾವುದೇ ಯುವಕ ಮಂಡಲಗಳು, ಶಾರದಾ ಮಹೋತ್ಸವ ಸೇವಾ ಸಮಿತಿಯವರು ಸಾರ್ವಜನಿಕ ಶಾರದಾ ಮಹೋತ್ಸವವನ್ನು ಆಚರಿಸಲು ವಿದ್ಯುತ್ ಸಂಪರ್ಕದ ಬಗ್ಗೆ ಅರ್ಜಿ ಸಲ್ಲಿಸಿದ್ದಲ್ಲಿ ಮೆಸ್ಕಾಂ ಕಚೇರಿಯಿಂದ ಯಾವುದೇ ವಿಳಂಬ ಮಾಡದೇ ಮಂಜೂರು ಮಾಡಬೇಕು ಎಂದು ಹೇಳಿದ್ದಾರೆ.
ಶಾರದಾ ಮಾತೆಯ ಶೋಭಾಯಾತ್ರೆ ಮಂಗಳೂರಿನ ಹಲವು ಪ್ರಮುಖ ಬೀದಿಗಳಲ್ಲಿ ಸಂಚರಿಸುವುದರಿಂದ ಎಲ್ಲಾ ರಸ್ತೆಗಳಲ್ಲಿ ಯಾವುದೇ ಹೊಂಡ, ಗುಂಡಿಗಳಿದ್ದಲ್ಲಿ ಅದನ್ನು ತಕ್ಷಣ ಮುಚ್ಚಿ ಶೋಭಾಯಾತ್ರೆ ಸರಾಗವಾಗಿ ಸಾಗಲು ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ನಗರದಲ್ಲಿ ಶೋಭಾಯಾತ್ರೆ ಅಥವಾ ದಸರಾಗೆ ಸಂಬಂಧಿಸಿದ ಇತರ ಯಾವುದೇ ಅನುಮತಿಯನ್ನು ಪೊಲೀಸ್ ಕಮೀಷನರೇಟ್ ಕಚೇರಿಯಿಂದ ಕೊಡಲು ಸಹಕರಿಸಬೇಕೆಂದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.