ಉಡುಪಿ, ಸೆ 22 (Daijiworld News/RD): ಪಶ್ಚಿಮಘಟ್ಟಗಳು ಜನ ಸಾಮಾನ್ಯರಿಗೆ ಕಸದ ತೊಟ್ಟಿಯಾಗಿದೆ, ಇನ್ನು ಸರಕಾರಕ್ಕೆ ಎಟಿಎಮ್ ಇದ್ದಂತೆ ಎಂದು ಸಹ್ಯಾದ್ರಿ ಸಂಚಯದ ಸಂಚಾಲಕ, ಪರಿಸರ ಪ್ರೇಮಿ ಹೋರಾಟಗಾರ ದಿನೇಶ್ ಹೊಳ್ಳ ಹೇಳಿದರು.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಆದಿವಾಸಿಗಳು, ಬುಡಕಟ್ಟು ಜನಾಂಗ ಪರಿಸರಕ್ಕೆಂದೂ ಹಾನಿ ಮಾಡುವುದಿಲ್ಲ, ಆದರೆ ಅರಣ್ಯ ಅಭಿವೃದ್ದಿ ಹೆಸರಲ್ಲಿ ಕಟ್ಟುವ ಹೋಮ್ ಸ್ಟೇ, ರೆಸಾರ್ಟ್ಗಳೇ ಮಾರಕವಾಗಿವೆ ಹಾಗಾಗಿ ಪಶ್ಚಿಮಘಟ್ಟಗಳು ಜನ ಸಾಮಾನ್ಯರಿಗೆ ಕಸದ ತೊಟ್ಟಿಯಾಗಿದೆ, ಸರಕಾರಕ್ಕೆ ಎಟಿಎಮ್ ಇದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕೃತಿಗೂ ತಾಳ್ಮೆ ಇರುತ್ತದೆ. ತಾಳ್ಮೆ ಅತಿಯಾದರೆ ಪಶ್ಚಿಮಘಟ್ಟ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಸರಕಾರದ ಅವೈಜ್ಞಾನಿಕ ಯೋಜನೆಗಳಿಂದ ಪರಿಸರ ಹಾನಿಯಾಗುತ್ತಿದೆ. ಪಶ್ಚಿಮ ಘಟ್ಟದ ಧಾರಣಾ ಶಕ್ತಿಗಿಂತ ಹೆಚ್ಚಿನ ಯೋಜನೆಗಳು ಸರಕಾರದಿಂದ ಅನುಷ್ಠಾನಗೊಳ್ಳುತ್ತಿದೆ. ಅಲ್ಲದೆ ಇನ್ನೊಂದಷ್ಟು ಯೋಜನೆಗಳು ಸಿದ್ದವಾಗಿವೆ. ಈ ಬಾರಿ ಕರ್ನಾಟಕದಲ್ಲಿ ನಡೆದಿರುವುದು ನೆರೆ ಅಲ್ಲ ಜಲಸ್ಪೋಟ. ಅರಣ್ಯ ಒತ್ತುವರಿ, ಹೋಮ್ ಸ್ಟೇ, ರೆಸಾರ್ಟ್, ಭೂ ಮಾಫಿಯಾದಿಂದ ಈ ರೀತಿ ಪರಿಣಾಮ ಬೀರುತ್ತಿದೆ. ಒಂದೂವರೆ ತಿಂಗಳು ಕಳೆದರೂ ಪ್ರವಾಹಕ್ಕೆ ಕಾರಣದ ಅಧ್ಯಯನದ ವರದಿಯನ್ನು ಸರಕಾರ ಮಾಡಿಲ್ಲ. ಅದೇ ಸರಕಾರ ಮುಂದಿನ ಮಳೆಗಾಲ ಅವಾಂತರ ಎದುರಿಸಲು ಕಾಯುತ್ತಿದೆ ಎಂದರು.
ಪಶ್ಚಿಮಘಟ್ಟಕ್ಕೆ ಕಸ್ತೂರಿರಂಗನ್ ಅಥವಾ ಗಾಡ್ಗಿಲ್ ವರದಿ ಜಾರಿಗೆಯಾಗಬೇಕು ಇಲ್ಲದಿದ್ದರೆ ಬೇಲಿಯಿಲ್ಲದ ಹೊಲದಂತೆ ಆಗುತ್ತದೆ. ಬೆಟ್ಟದಲ್ಲಿ ಹುಲ್ಲುಗಾವಲು ನಾಶಗೊಳ್ಳುತ್ತಿದೆ. ಮಾನವನ ಹಸ್ತಕ್ಷೇಪ ಮಿತಿ ಮೀರಿದಾಗ ಭೂಕುಸಿತ, ಪ್ರವಾಹದಂಥ ಅಪಾಯ ಸಂಭವಿಸಿ, ಪ್ರಕೃತಿ ತನ್ನನ್ನು ತಾನು ಶಾಂತಗೊಳಿಸುತ್ತದೆ. ಕೆಲವು ರಾಜಕಾರಿಣಿಗಳು ಕುಮಾರಧಾರಕ್ಕೂ - ಎತ್ತಿನಹೊಳೆಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ಮಾತನಾಡುತ್ತಾರೆ. ಇವೆಲ್ಲ ಮಾನವನಿಂದ ಮಾಡಲ್ಪಟ್ಟ ದುರಂತಗಳು ಎಂದು ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ಒಂದೇ ಕಡೆ ಬೆಟ್ಟಕ್ಕೆ ಕಾಡ್ಗಿಚ್ಚು ಉಂಟಾಗುತ್ತಿದೆ. ಚಾರ್ಮಾಡಿ ಘಾಟಿ ಮತ್ತು ಶಿರಾಡಿ ಘಾಟಿನಲ್ಲಿ ಪ್ರಯಾಣಿಸುವುದು ಉಚಿತ ಅಲ್ಲ. ಅಲ್ಲಿ ಪದೇ ಪದೇ ಭೂಕುಸಿತ ಆಗುತ್ತಲೇ ಇರುತ್ತದೆ. ಅಲ್ಲಿ ನೀರು ನಿಲ್ಲುವ ಪದರ ಸವೇದು ಹೋಗಿದೆ. ಸರಕಾರದ ನೀರಾವರಿ ಯೋಜನೆಗಳು ಕೇವಲ ನೋಟು-ಓಟು- ಸೀಟಿಗಾಗಿ ಮಾತ್ರ. ಎತ್ತಿನ ಹೊಳೆ ಎಂದರೆ ಅದು ಜನರನ್ನು ಮೂರ್ಖರನ್ನಾಗಿಸುವ ಯೋಜನೆ. ಎಂದಿಗೂ ಪೂರ್ಣವಾಗುವುದಿಲ್ಲ. ಯೋಜನೆ ಮಾತ್ರ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇತ್ತೀಚಿಗೆ ಎತ್ತಿನ ಹೊಳೆ ಫಲಾನುಭವಿಗಳೆ ಈಗ ಅದನ್ನು ವಿರೋಧಿಸುತ್ತಿದ್ದಾರೆ. ಆದರೂ ಈ ಯೋಜನೆ ಪ್ರಯತ್ನ ಮುಂದುವರಿಯುತ್ತಲೇ ಇದೆ.
ಇನ್ನು ಪರಿಸರ ಕಾಳಜಿ ವಿಷಯಕ್ಕೆ ಬಂದಾಗ ಅದಕ್ಕೆ ಧಾರ್ಮಿಕತೆಯನ್ನು ಸೇರಿಸಿದಾಗ ಜನರು ಎಚ್ಚೆತ್ತುಕೊಳ್ಳಬಹುದು ಎಂದು ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದರು.