ಕಾಸರಗೋಡು, ಸೆ 23 (Daijiworld News/RD): ಯುವಕರ ತಂಡವೊಂದು ಖಾಸಗಿ ಆಸ್ಪತ್ರೆಗೆ ನುಗ್ಗಿ ದಾಂದಲೆ ನಡೆಸಿದ ಘಟನೆ ಭಾನುವಾರ ರಾತ್ರಿ ನಗರ ಹೊರವಲಯದ ನುಳ್ಳಿಪ್ಪಾಡಿಯಲ್ಲಿ ನಡೆದಿದೆ.
ನಿಮಿಷಗಳ ಕಾಲ ತಂಡವು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ರೋಗಿಗಳು, ಸಿಬಂದಿಗಳ ಮೇಲೆ ಹಲ್ಲೆ ನಡೆಸಿದೆ. ಗಾಜು, ಪೀಠೋಪಕರಣ ಹಾಗೂ ಇತರ ವಸ್ತುಗಳಿಗೆ ಹಾನಿ ಎಸಗಿದ್ದಾರೆ. ಕೊಲೆ ಪ್ರಕರಣವೊಂದರ ಆರೋಪಿ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ದಾಂಧಲೆಯಿಂದ ರೋಗಿಗಳು, ಸಿಬಂದಿಗಳು ಅಲ್ಲಿಂದ ಭಯದಿಂದ ಓಡುವಂತಾಯಿತು. ಬೈಕ್ ಅಪಘಾತ ವೊಂದರಲ್ಲಿ ಗಾಯಗೊಂಡ ಇಬ್ಬರನ್ನು ಈ ಆಸ್ಪತ್ರೆಗೆ ತರಲಾಗಿತ್ತು. ಇವರ ಜೊತೆ ಬಂದ ತಂಡ ಈ ಕೃತ್ಯ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವೈದ್ಯರ ಕಚೇರಿಯ ಗಾಜುಗಳನ್ನು ಹುಡಿ ಮಾಡಿದ ತಂಡ ಆಸ್ಪತ್ರೆಯುದ್ದಕ್ಕೂ ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಹಾನಿಗೊಳಿಸಿತು. ಘಟನೆ ಸುದ್ದಿ ತಿಳಿದು ನಗರ ಠಾಣಾ ಪೊಲೀಸರು ಆಸ್ಪತ್ರೆಗೆ ತಲಪುವಷ್ಟರಲ್ಲಿ ತಂಡವು ಪರಾರಿಯಾಗಿದೆ. ಸ್ಥಳದಲ್ಲಿ ಜಮಾಯಿಸಿದ್ದ ಗುಂಪನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಹಲವು ಮಂದಿ ಬಿದ್ದು ಗಾಯಗೊಂಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.