ಕೋಟ, ಸೆ 23 (Daijiworld News/RD): ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತ್ರತ್ವದಲ್ಲಿ ಸಾಲಿಗ್ರಾಮ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ಜೊತೆಗೂಡಿ ಕೋಟದಿಂದ ಮಾಬುಕಳದವೆರೆಗೆ ಸರ್ವಿಸ್ ರಸ್ತೆ ಆಗ್ರಹ ಸೇರಿದಂತೆ ವಿರುದ್ಧ ದಿಕ್ಕಿನ ಸಂಚಾರದ ಕೇಸಿನ ವಿರುದ್ಧ ಬೃಹತ್ ಹೋರಾಟದ ಸಲುವಾಯ ಭಾನುವಾರ ಸಾಲಿಗ್ರಾಮದ ಗುರುನರಸಿಂಹ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಈವರೆಗೆ ಟೋಲ್ ಹೋರಾಟದಲ್ಲಿ ಯಶಸ್ಸು ಕಂಡಿದ್ದೇವೆ.ಆದರೆ ನಮ್ಮಗೆ ಅಗತ್ಯತೆ ಇದ್ದ ಸರ್ವಿಸ್ ರಸ್ತೆಯ ನಿರ್ಲಕ್ಷ್ಯದ ವಿರುದ್ಧ ಹೋರಾಟ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಇಂದು ಈ ಸಭೆಯನ್ನು ಕರೆಯಲಾಗಿದೆ. ಇತ್ತೀಚಿಗಿನ ದಿನಗಳಲ್ಲಿ ಕೋಟದಿಂದ ಮಾಬುಕಳದವರೆಗೆ ಸರ್ವಿಸ್ ರಸ್ತೆ ಇಲ್ಲದೆ ವಾಹನ ಸವಾರಿಂದ ಸಾರ್ವಜನಿಕರವರೆಗೆ ತೀವ್ರವಾದ ಸಮಸ್ಯೆ ಉಂಟಾಗುತ್ತಿದೆ.ಅಲ್ಲದೆ ಅಪಘಾತಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ ಇದಲ್ಲದೆ ಇತ್ತ ಕೇಂದ್ರ ಸರಕಾರ ಜಾರಿಗೆಗೊಳಿಸಿದ ಸಂಚಾರ ನಿಯಮದಿಂದ ಸವಾರರಿಗೆ ಬಾರೀ ಸಮಸ್ಯೆಯಾಗಿದೆ. ಇದೆಲ್ಲ ನಮಗೆ ಸಮರ್ಪಕವಾದ ಸರ್ವಿಸ್ ರಸ್ತೆಯ ಅವಶ್ಯಕತೆ ಇದ್ದು ಇದನ್ನು ಮೊದಲು ಸರಿಪಡಿಸಿ ನಂತರ ದಂಡ ವಿಧಿಸಿ ಎಂದು ಸಭೆಯಲ್ಲಿ ಆಗ್ರಹಿಸಿದರು.ಹಾಗೂ ಮುಂದಿನ ಹೋರಾಟದ ರೂಪುರೇಖೆಯನ್ನು ಪ್ರಕಟಿಸಿದರು.ಇದೇ ಬರುವ ಸೆ.30ರಂದು ಮಾಬುಕಳದಿಂದ ಕೋಟದವರೆಗೆ ಬೃಹತ್ ಪಾದೆಯಾತ್ರೆಯ ಮೂಲಕ ನಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದರು.
ಸಾಲಿಗ್ರಾಮ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ಕಾರ್ಯದರ್ಶಿ ನಾಗರಾಜ್ ಗಾಣಿಗ ಮಾತನಾಡಿ ಜನಸಾಮಾನ್ಯರಿಗೆ ಅವಶ್ಯಕವಾದ ಸರ್ವಿಸ್ ರಸ್ತೆಯನ್ನು ನಿರ್ಮಿಸದೆ ಒಂದೆಡೆ ಟೋಲ್ ಸಂಗ್ರಹಿಸುತ್ತಿದೆ. ನವಯುಗ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಪೋಲಿಸ್ ಇಲಾಖೆಯ ದರ್ಪದ ವಿರುದ್ಧ ಕೂಡ ಕೆಂಡಮಂಡಲವಾದರು,ಸರ್ವಿಸ್ ರಸ್ತೆಯ ಆಗದೆ ಪೋಲಿಸ್ ಇಲಾಖೆ ವಾಹನ ಸವಾರರಿಗೆ ದಂಡ ವಿಧಿಸಿದರೆ ಉಗ್ರಹೋರಾಟ ಇಲಾಖೆ ವಿರುದ್ಧ ಮಾಡಬೇಕಾದಿತು.ಅಲ್ಲದೆ ನಾವು ಚುನಾಯಿಸಿ ಕಳುಹಿಸಿದ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸಿ ನಮ್ಮ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಸಾಲಿಗ್ರಾಮ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ನಾಯಿರಿ,ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ವಿಠಲ್ ಪೂಜಾರಿ ಐರೋಡಿ,ಅಲ್ವಿನ್ ಅಂದ್ರೆ,ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹೆದ್ದಾರಿ ಜಾಗೃತಿ ಸಮಿತಿಯ ಪ್ರಶಾಂತ್ ಶೆಟ್ಟಿ ಪಾಂಡೇಶ್ವರ ನಿರೂಪಿದರು.
ಈ ಬಾರಿ ಹೆದ್ದಾರಿ ಜಾಗೃತಿ ಸಮಿತಿ ಕರೆದ ಸಭೆಯಲ್ಲಿ ಬಾರಿ ಪ್ರಮಾಣದಲ್ಲಿ ಸಾರ್ವಜನಿಕರು ನೆರೆದಿದ್ದು ಬೆಂಬಲವನ್ನು ಸೂಚಿಸಿದರಲ್ಲದೆ ಸೆ.30ರ ಅಪರಾಹ್ನ 3ಗ.ಹೆದ್ದಾರಿ ಸರ್ವಿಸ್ ರಸ್ತೆಯ ಹೋರಾಟಕ್ಕೆ 3ರಿಂದ 5ಸಾವಿರ ಜನ ಸೇರಿಸುವ ಜವಾಬ್ದಾರಿ ತೆಗೆದುಕೊಂಡರು.