ಚೆನ್ನೈ ಡಿ 31: ತಮಿಳುನಾಡಿನ ಚಿತ್ರಜಗತ್ತಿನ ಸೂಪರ್ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಇದ್ದ ಊಹಾಪೋಹಕ್ಕೆ ಕೊನೆಗೂ ಪರದೆ ಬಿದ್ದಿದೆ.ಕಾರಣ ರಾಜಕೀಯ ಪ್ರವೇಶದ ಬಗ್ಗೆ ರಜನಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಚೆನ್ನೈನ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ರಜನಿಕಾಂತ್ ಸ್ವಂತ ಪಕ್ಷವನ್ನು ಸ್ಥಾಪಿಸುತ್ತಿರುವುದಾಗಿ ತಿಳಿಸಿದ್ದು, ತಮಿಳರಿಗಾಗಿ ನನ್ನ ಹೋರಾಟ ಮುಂದುವರೆಸುವುದಾಗಿ ಅವರು ಹೇಳಿದ್ದಾರೆ. ಜತೆಗೆ ಪಕ್ಷದ ಹೆಸರು ಕೆಲವೇ ದಿನಗಳಲ್ಲಿ ಬಹಿರಂಗಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ತಮಿಳುನಾಡಿನ ರಾಜಕೀಯ ಕೆಟ್ಟ ದಾರಿಯಲ್ಲಿ ಸಾಗುತ್ತಿದ್ದು ಕಳೆದ ಒಂದು ವರ್ಷದಿಂದ ತಮಿಳುನಾಡು ಜನತೆ ಈ ರೀತಿಯ ಬೆಳವಣಿಗೆಯಿಂದ ಜನ ರೋಸಿಹೋಗಿದ್ದಾರೆ. ಉತ್ತಮ ಕೆಲಸ ಉತ್ತಮ ಯೋಚನೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವಕ್ಕಾಗಿ ನನ್ನ ಪಕ್ಷ ಕಾರ್ಯ ನಿರ್ವಹಿಸಲಿದೆ.
ತಮಿಳುನಾಡಿನ ಎಲ್ಲ 234 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದಾಗಿ ತಿಳಿಸಿರುವ ರಜನಿ, ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯವಾಗಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.