ಮಂಗಳೂರು, ಸೆ.24(Daijiworld News/SS): ನಗರದ ವಿಶೇಷ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಕೃಷ್ಣಮೃಗ ಚರ್ಮ ಮಾರಾಟ ಜಾಲವನ್ನು ಪತ್ತೆ ಹಚ್ಚಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ದಾಟ್ನಾಳ್ ನಿವಾಸಿಗಳಾದ ರವಿ ಹನುಮಂತಪ್ಪ (32), ಮಲ್ಲಪ್ಪ (32), ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ನಿವಾಸಿಗಳಾದ ಪರಶುರಾಮ ಲಮಾಣಿ (32), ಟಿಪ್ಪು ಸುಲ್ತಾನ್ (33) ಎಂದು ಗುರುತಿಸಲಾಗಿದೆ.
ಸೆ.23ರ ಬೆಳಗ್ಗೆ 8:30ಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪ ನಾಲ್ವರು ಅನುಮಾನಾಸ್ಪದವಾಗಿ ನಿಂತುಕೊಂಡಿದ್ದರು. ಅರಣ್ಯ ಸಂಚಾರ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಲಾಯಿತು. ಪೊಲೀಸರನ್ನು ನೋಡಿದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಲಾಯಿತು ಎನ್ನಲಾಗಿದೆ.
ವಿಚಾರಣೆ ವೇಳೆ ಕೃಷ್ಣಮೃಗ ಚರ್ಮ ಹಾಗೂ ಕೊಂಬನ್ನು ಮಾರಾಟಕ್ಕೆ ತಂದಿರುವುದು ಪತ್ತೆಯಾಗಿದೆ. ಅವರಿಂದ ಎರಡು ಕೃಷ್ಣಮೃಗ ಚರ್ಮ ಹಾಗೂ ಒಂದು ಜೊತೆ ಕೊಂಬನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕಾಗಿ ಮಂಗಳೂರು ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.