ಮಂಗಳೂರು ಡಿ 31 : ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ್ ಶೆಟ್ಟಿ ಗಡಿಪಾರು ಅದೇಶವನ್ನು ಖಂಡಿಸಿ ಬಿಜೆಪಿ, ಹಿಂದೂ ಪರ ಸಂಘಟನೆ ವತಿಯಿಂದ ನಾಳೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಡಿ 31 ರ ಭಾನುವಾರ ಬಿ.ಸಿರೋಡಿನ ಕೃಷಿ ಮಂದಿರದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನಾಳೆಯಿಂದ ಆರಂಭಿಸಿ ನ್ಯಾಯ ಸಿಗುವವರೆಗೆ ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲೆಯಲ್ಲಿ ಮತೀಯ ಗಲಭೆ ಹಾಗೂ ಅದರ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ರತ್ನಾಕರ ಶೆಟ್ಟಿ ಹಾಗೂ ಇಬ್ರಾಹಿಂ ಖಲೀಲ್ ಎಂಬಾತನನ್ನು ಜಿಲ್ಲೆಯಿಂದ 6 ತಿಂಗಳ ಕಾಲ ಗಡಿಪಾರು ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಕಾತ್ದೆ ಪ್ರಕಾರ ಯಾವುದೇ ವ್ಯಕ್ತಿ ದುಷ್ಕೃತ್ಯದಲ್ಲಿ , ಸಮಾಜಘಾತುಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆ ಅಂಥವರನ್ನು ಗುರುತಿಸಿ ಗಡಿ ಪಾರು ಮಾಡಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಡಿ 30 ರ ಶನಿವಾರ ಇಬ್ಬರನ್ನೂ ಜೆಲ್ಲೆಯಿಂದ ಗಡಿ ಪಾರು ಮಾಡಲಾಗಿದೆ.