ಮಂಗಳೂರು, ಸೆ.24(Daijiworld News/SS): ಹೊಂಡ-ಗುಂಡಿಗಳಿಂದ ಕೂಡಿರುವ ನಗರದ ಸೆಂಟ್ರಲ್ ಮಾರ್ಕೆಟ್ ಮುಂಭಾಗದ ರಸ್ತೆಯಲ್ಲಿ, ರಸ್ತೆ ಗುಂಡಿ ಸರಿಪಡಿಸುವಂತೆ ಆಗ್ರಹಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆದಿದೆ.
ಮಂಗಳೂರಿನ ರಸ್ತೆಗಳ ಗುಂಡಿಗಳಿಗೆ ಮುಕ್ತಿ ನೀಡಿ ಎಂಬ ಕಳಕಳಿಯಿಂದ ಮಂಗಳೂರಿನ 6ನೇ ತರಗತಿ ವಿದ್ಯಾರ್ಥಿನಿ ಗಗನಯಾತ್ರಿಯ ದಿರಿಸಿನಲ್ಲಿ ನಗರದಲ್ಲಿ ಚಂದ್ರನ ಮೇಲೆ ನಡೆದಂತೆ ನಡೆದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾಳೆ. ವಿದ್ಯಾರ್ಥಿನಿ ಆ್ಯಡ್ಲಿನ್ ಡಿಸಿಲ್ವ ಈ ವಿನೂತನ ಪ್ರತಿಭಟನೆ ಮಾಡಿದ ಬಾಲೆ.
ಚಂದ್ರನ ಮೇಲೆ ಇಳಿದು ಅಲ್ಲಿ ಹೊಂಡ-ಗುಂಡಿಗಳ ನಡುವೆ ಸಾಗುವ ಬಾಹ್ಯಾಕಾಶದ ವಿನೂತನ ಪರಿಕಲ್ಪನೆಯನ್ನು ಮಂಗಳೂರಿನ ರಸ್ತೆ ಹೊಂಡವನ್ನು ಪ್ರತಿನಿಧಿಸುವಂತೆ ವೀಡಿಯೋ ಚಿತ್ರೀಕರಿಸಲಾಗಿದೆ. ಚಂದ್ರನಂತೆಯೇ ಮಂಗಳೂರಿನ ರಸ್ತೆಯೂ ಹೊಂಡ-ಕಲ್ಲುಗಳಿಂದ ಕೂಡಿದೆ ಎಂಬುದನ್ನು ಪಾಲಿಕೆಗೆ ಸೂಚ್ಯವಾಗಿ ತಿಳಿಸುವುದು ಈ ವಿನೂತನ ಪ್ರತಿಭಟನೆಯ ಆಶಯವಾಗಿದೆ.