ಬೆಳ್ತಂಗಡಿ, ಸೆ 24 (DaijiworldNews/SM): ಆ. 9ರಂದು ಬೆಳ್ತಂಗಡಿ ತಾಲೂಕಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಹಾಗೂ ಪ್ರವಾಹದಿಂದ ಹಾನಿಗೊಳಗಾದ ೧೭ ಗ್ರಾಮಗಳು ಚೇತರಿಕೆ ಕಂಡಿಲ್ಲ. ಗ್ರಾಮದಲ್ಲಿನ ಜನರು ನೆರೆಯಿಂದ ಉಂಟಾಗಿದ್ದ ಆಘಾತದಿಂದ ಸಂಪೂರ್ಣ ಹೊರ ಬಂದಿಲ್ಲ. ಈ ನಡುವೆ ಗ್ರಾಮದಲ್ಲಿ ಪುನರ್ವಸತಿ ಹಾಗೂ ಅಭಿವೃದ್ಧಿ ಕಾರ್ಯ ಚುರುಕುಗೊಂಡಿದೆ. ಇದೀಗ ಇಲ್ಲಿನ 257 ಮನೆಗಳ ಪುನರ್ವಸತಿ ಕಾಮಗಾರಿಗೆ ಆದೇಶ ಪತ್ರವನ್ನು ಫಲಾನುಭವಿಗಳಿಗೆ ಶಾಸಕ ಹರೀಶ ಪೂಂಜ ಮಂಗಳವಾರ ಬೆಳ್ತಂಗಡಿ ಮಂಜುನಾಥೇಶ್ವರ ಕಲಾಭವನದಲ್ಲಿ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಪೂಂಜ, ತಾಲೂಕಿನಲ್ಲಿ ನೆರೆಯಿಂದ 170 ಮನೆಗಳು ಸಂಪೂರ್ಣ ಹಾನಿಯಾಗಿದ್ದು ಒಟ್ಟು 257 ಮನೆಗಳ ಪುನರ್ವಸತಿ ಕಾಮಗಾರಿಗೆ ಒಂದೂವರೆ ತಿಂಗಳೊಳಗೆ ಮುಂದಡಿ ಇಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಪ್ರಥಮವಾಗಿ ಮನೆಗಳ ನಿರ್ಮಾಣ ಕಾಮಗಾರಿಗೆ ಆದೇಶ ಪತ್ರವನ್ನು ತಾಲೂಕಿನಲ್ಲಿ ನೀಡಲಾಗಿದೆ. ನೆರೆ ಹಾವಳಿಯಿಂದಾಗಿ ತಾಲೂಕಿನಲ್ಲಿ ವಸತಿ ಕಳೆದುಕೊಂಡವರಿಗೆ ಶಾಶ್ವತವಾಗಿ ಮನೆ ನಿರ್ಮಿಸಲು ಸರಕಾರ ಬದ್ಧವಾಗಿದೆ. ರಾಜೀವ ಗಾಂಧಿ ವಸತಿ ಯೋಜನೆಯಡಿ ಕಾನೂನು ಸಡಿಲಗೊಳಿಸಿ ರಾಜ್ಯದಲ್ಲೇ ಮೊದಲ ಬಾರಿಗೆ ಕಾಮಗಾರಿಗೆ ಮುಂಗಡ ಹಣ ನೀಡಲಾಗುತ್ತಿದೆ ಎಂದರು.
ರಾಜ್ಯ ಸರಕಾರವು ಆರಂಭದಲ್ಲಿ ಒಂದು ಲಕ್ಷ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭವಾದ ಬಳಿಕ ಒಟ್ಟು ೫ ಲಕ್ಷ ರೂ.ಗಳನ್ನು ಮನೆ ನಿರ್ಮಾಣಕ್ಕೆ ನೀಡಲಾಗುತ್ತದೆ. ಸಂತ್ರಸ್ತರು ಪರಿಹಾರವನ್ನು ಸದ್ವಿನಿಯೋಗಿಸುವಂತೆ ಮನವಿ ಮಾಡಿದರು. ಪ್ರವಾಹದ ಸಂದರ್ಭ ಎಲ್ಲರೂ ಪಕ್ಷ ಬೇಧ ಮರೆತು ಕೆಲಸ ಮಾಡಿದ್ದಾರೆ. ಸಹಕಾರ ನೀಡಿದ್ದಾರೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ದಾನಿಗಳು ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿದ್ದರಿಂದ ಪುನರ್ವಸತಿಗೆ ಸಾಧ್ಯವಾಗಿದೆ ಎಂದರು.
ಮಕ್ಕಿ ನಿವಾಸಿಗಳ ಸ್ಥಳಾಂತರಕ್ಕೆ ಚಿಂತನೆ
ಮಿತ್ತಬಾಗಿಲು ಗ್ರಾಮದ ಮಕ್ಕಿ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸುವ ಚಿಂತನೆ ನಡೆಸಲಾಗಿದೆ. ಇವರ ಭೂಮಿ ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಸುತ್ತ ಮೀಸಲು ಅರಣ್ಯವಿದೆ. ಅದಕ್ಕೆ ಹಸ್ತಾಂತರಿಸಿ, ಬಳಿಕ ಅರಣ್ಯ ಇಲಾಖೆ ಮೂಲಕ ಪರಿಹಾರ ಒದಗಿಸುವ ಕಾರ್ಯ ನಡೆಸಲಾಗುತ್ತಿದೆ. ಮಿತ್ತಬಾಗಿಲಿನ ಗಣೇಶ್ ನಗರದ 32 ಕುಟುಂಬಗಳನ್ನು ಸ್ಥಳಾಂತರಗೊಳಿಸಿ ಬದಲಿ ನಿವೇಶನ ಹಾಗೂ ಮನೆ ಮಂಜೂರಾತಿಗೆ ಪ್ರಯತ್ನಿಸಲಾಗುತ್ತಿದೆ. ನದಿ ಬದಿಯಲ್ಲಿರುವ ಮನೆಗಳ ನಿವಾಸಿಗಳು ಸ್ಥಳಾಂತರವಾಗಲು ಬಯಸಿದರೆ ಅವರಿಗೂ ಪುನರ್ವಸತಿ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಹಾನಿಗೊಳಗಾಗಿದ್ದು, ಪಟ್ಟಿಯಲ್ಲಿ ಹೆಸರು ಬಿಟ್ಟಿದ್ದರೆ ಮಾಹಿತಿ ನೀಡುವಂತೆ ಶಾಸಕರು ತಿಳಿಸಿದರು.