ವಿಟ್ಲ, ಸೆ 24 (DaijiworldNews/SM): ರಾಜ್ಯದಲ್ಲಿ ಸಾಲಮನ್ನಾದ ಕೂಗು ಜೋರಾಗಿದೆ. ನೆರೆ, ಬರದಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳ ರೈತರು ಕಂಗಾಲಾಗಿದ್ದಾರೆ. ಈ ನಡುವೆ ಅಧಿಕಾರಕ್ಕೆ ಬರುವ ಸರಕಾರ ತಮ್ಮ ಖುರ್ಚಿಯನ್ನು ಭದ್ರಪಡಿಸುವತ್ತಲೇ ಗಮನ ಹರಿಸುತ್ತಿದೆ. ರಾಜ್ಯದಲ್ಲೆಡೆ ಅನ್ನದಾತನ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಹ ಪರಿಸ್ಥಿತಿ ಎದುರಾಗುತ್ತಿದೆ. ಈಗಾಗಲೇ ಆಡಳಿತ ಪಕ್ಷಗಳ ವಿರುದ್ಧ ಪ್ರತಿ ಪಕ್ಷಗಳು ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಇದೀಗ ರೈತರೇ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಜ್ಯದ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿಟ್ಲದಲ್ಲಿ ರೈತರಿಗೆ ಅಧ್ಯಯನ ಶಿಬಿರವೊಂದನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರೈತ ಮುಖಂಡರು ಸರಕಾರಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರೈತರನ್ನು ವಂಚಿಸುವ ಉದ್ದೇಶದಿಂದ ರಾಜಕೀಯ ಪಕ್ಷಗಳು ತಮ್ಮ ಅಜೆಂಡಾವನ್ನು ಬದಲಾಯಿಸಿಕೊಂಡಿದ್ದಾರೆ. ಭ್ರಷ್ಟರನ್ನು ಬೆಂಬಲಿಸಿ ಹೋರಾಟಕ್ಕೆ ಇಳಿಯುವವರಿಗೆ ಮಾನ ಮರ್ಯಾದೆ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಅವರು ವಿಟ್ಲ ಸಮೀಪದ ಸಿಪಿಸಿಆರ್ಐ ಮಂಗಳ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ, ಮಠ ಜೀವ ಕಳೆದುಕೊಳ್ಳುತ್ತಿದ್ದು, ನರೇಂದ್ರ ಮೋದಿ ಅವರು ಈ ಬಗ್ಗೆ ಅಮೇರಿಕಾದಲ್ಲಿ ಒಂದು ಮಾತು ಎತ್ತಿಲ್ಲ. ರೈತರು ಆತಂಕದಲ್ಲಿದ್ದರೂ ಅವರಿಗೆ ಸಾಂತ್ವನ ಹೇಳುವ ಕಾಳಜಿ ಪ್ರಧಾನಿಯವರಿಗೆ ಇಲ್ಲದಂತಾಗಿದೆ. ಇಂತಹ ಪ್ರಧಾನಿಯವರನ್ನು ಪಡೆದ ನಾವು ದುರಾದೃಷ್ಟರು ಎಂದು ಹೇಳಿದರು. ಡಿಕೆಶಿಗಾಗಿ ಸಾವಿರಾರು ಮಂದಿ ಬೀದಿಗೆ ಇಳಿಯುತ್ತಾರೆ. ರೈತರಿಗಾಗಿ ಯಾರೂ ಕೂಡ ಬೀದಿಗೆ ಇಳಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ವಿಟ್ಲ ಸಿಪಿಸಿಆರ್ಐ ನಿರ್ದೇಶಕ ಡಾ. ಸಿ. ಟಿ. ಜೋಷ್ ಗಿಡ ನೆಡುವ ಮೂಲಕ ಉದ್ಘಾಟಿಸಿದರು.