ಉಡುಪಿ, ಸೆ 25 (Daijiworld News/MSP): ಗಾಂಜಾವನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಉತ್ತರ ಭಾರತದ ಮೂಲದ ಇಬ್ಬರನ್ನು ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ಸಿಬ್ಬಂದಿಗಳ ತಂಡ ಸೆ. 24 ರ ಮಂಗಳವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ರಿಷಬ್ ರಾಜ್ಸಿಂಗ್, ಪಿಯೂಷ್ ಅಗರ್ವಾಲ್
ಬಂಧಿತರ ಆರೋಪಿಗಳನ್ನು ಉತ್ತರ ಪ್ರದೇಶ ಮಹೋಬ ಜಿಲ್ಲೆಯ ಪಿಯೂಷ್ ಅಗರ್ವಾಲ್ (20) ಮತ್ತು ತೀಕಾಮ್ಗರ್ ಜಿಲ್ಲೆಯ ರಿಷಬ್ ರಾಜ್ಸಿಂಗ್ (21) ಎಂದು ಗುರುತಿಸಲಾಗಿದೆ.
ಆರೋಪಿತರು ಹೆರ್ಗಾ ಗ್ರಾಮದ, 17ನೇ ಈಶ್ವರ ನಗರ ವಾರ್ಡಿನ, 12ನೇ ಅಡ್ಡ ರಸ್ತೆಯಲ್ಲಿರುವ ಸರಳಬೆಟ್ಟು ಇಂದಿರಾ ಹೆಸರಿನ ಮನೆಯ ಒಂದನೇ ಮಹಡಿಯಲ್ಲಿ ವಾಸವಾಗಿದ್ದು ಇಲ್ಲಿ ಸುಮಾರು 3 ಲಕ್ಷದ ಐವತ್ತು ಸಾವಿರ ಮೌಲ್ಯದ 8 ಕಿಲೋ 830 ಗ್ರಾಂ ತೂಕದ ಗಾಂಜಾವನ್ನು ಮಾರಾಟ ಮಾಡಲೆಂದು ದಾಸ್ತಾನು ಇರಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ ಪಿ. ರವರ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ಸಂದರ್ಭ ಗಾಂಜಾ ಸಹಿತ, ತೂಕ ಸಾಧನ- ೧, ಸಣ್ಣ ಸಣ್ಣ ಖಾಲಿ ಪ್ಲಾಸ್ಟಿಕ್ ತೊಟ್ಟೆಗಳು-17, ಗಿರಾಕಿ ಕುದುರಿಸಲು ಬಳಸಿದ್ದ ಮೊಬೈಲ್ ಹ್ಯಾಂಡ್ ಸೆಟ್ಗಳು-3 , ಗಾಂಜಾ ಮಾರಾಟ ಮಾಡಿ ಬಂದ ನಗದು ಹಣ ರೂಪಾಯಿ 3,15,000 ಸಹಿತ ಒಟ್ಟು ರೂಪಾಯಿ 6,91,350 ಅಂದಾಜು ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.