ಮಂಗಳೂರು, ಸೆ 25 (Daijiworld News/MSP): ಚಾಲಕ ವರ್ಗಕ್ಕೆ ಮಾರಕವಾದ, ಜನಸಾಮಾನ್ಯರನ್ನು ಸುಲಿಗೆ ಮಾಡುವ ಮೋಟಾರು ವಾಹನ ಕಾಯಿದೆ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಹಾಗೂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರ ಪ್ರಮುಖ ರಸ್ತೆಗಳ ಅವ್ಯವಸ್ಥೆ,ಅಕ್ರಮ ಟೋಲ್ ಸಂಗ್ರಹ ಹಾಗೂ ಪಾರ್ಕಿಂಗ್ ಅವ್ಯವಸ್ಥೆಯನ್ನು ವಿರೋಧಿಸಿ ವಿವಿಧ ಚಾಲಕ, ಸಾರಿಗೆ ಯೂನಿಯನ್ಗಳು, ಸಾಮಾಜಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆಯಿತು.
ನಗರದ ಮಿನಿ ವಿಧಾನಸೌಧದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಸಂಖ್ಯೆಯ ವಿವಿಧ ವಿಭಾಗದ ಚಾಲಕರು ಹಾಗೂ ಸಾರ್ವಜನಿಕರು, "ಚಾಲಕ ವರ್ಗದ ಬದುಕನ್ನು ನಾಶ ಮಾಡಿದ ಮಾರಕ ಕಾಯಿದೆ ಬೇಡವೇ ಬೇಡ,ಮಾಡದ ತಪ್ಪಿಗೆ ಜೈಲಿಗೆ ಕಳುಹಿಸುವ ಕೇಂದ್ರದ ನೀತಿಗೆ ಧಿಕ್ಕಾರ,ಕಳಪೆ ರಸ್ತೆಗಳನ್ನು ಮುಂದಿಟ್ಟು ಅಕ್ರಮ ಟೋಲ್ ಸಂಗ್ರಹಿಸುವ ದರೋಡೆ ನೀತಿಗೆ ಧಿಕ್ಕಾರ" ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯೆದುರು ಜಮಾವಣೆಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೇಂದ್ರ ಸರಕಾರವು ಇಡೀ ದೇಶಕ್ಕೆ ಅನ್ವಯವಾಗುವಂತೆ ಏಕಾಏಕಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ. ಚಾಲಕರನ್ನು ದಮನಿಸಲು ಹೊರಟ ಕೇಂದ್ರ ಸರಕಾರವು ಜಾರಿಗೆ ತಂದಿರುವ ಮಾರಕ ಕಾಯಿದೆಯು ದೇಶದ ದುಡಿಯುವ ವರ್ಗದ ಮೇಲೆ ನಡೆಸಿರುವ ತೀವ್ರ ಧಾಳಿಯಾಗಿದೆ.ಯಾವುದೇ ಕಾರಣಕ್ಕೂ ಇಂತಹ ಅಮಾನವೀಯ,ಕ್ರೂರ ಕಾಯಿದೆಗಳನ್ನು ಒಪ್ಪಲು ಸಾದ್ಯವಿಲ್ಲ.ಸಂಘಟಿತ ಹೋರಾಟವೊಂದೇ ಇದಕ್ಕೆ ಉತ್ತರವಾಗಬೇಕು. ಇದರ ಹಿಂದೆ ಕಾರ್ಪೊರೇಟ್ ಶಕ್ತಿಗಳನ್ನು ರಕ್ಷಿಸುವ, ಖಾಸಗೀಕರಣಗೊಳಿಸುವ ಹುನ್ನಾರ ಇದೆ. ನೂತನ ವಾಹನ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ದ.ಕ.ಜಿಲ್ಲಾ ಟ್ಯಾಕ್ಸಿಮೆನ್ ಎಸೋಶಿಯೇಷನ್ ನ ಜಿಲ್ಲಾಧ್ಯಕ್ಷರಾದ ದಿನೇಶ್ ಕುಂಪಲರವರು, " ಕೇಂದ್ರ ಸರಕಾರವು ಸೆಪ್ಟೆಂಬರ್ 1 ರಿಂದ ಜಾರಿಗೆ ತಂದಿರುವ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಯಿಂದಾಗಿ ದೇಶಾದ್ಯಂತ ಚಾಲಕರು ತೀವ್ರ ಆಕ್ರೋಶಿತರಾಗಿದ್ದು, ದುಬಾರಿ ದಂಡವನ್ನು ಸಹಿಸಲು ಅಸಾಧ್ಯವಾಗಿದೆ. ವಿಪರೀತ ದಂಡದಿಂದಾಗಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಎಲ್ಲವನ್ನು ಸರಿಪಡಿಸಲು ಹೊರಟಿರುವುದು ತೀರಾ ಭ್ರಮೆಯಾಗಿದೆ.ಪ್ರಸ್ತುತ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಅದನ್ನು ಸರಿಪಡಿಸಲು ಸರಕಾರವಾಗಲೀ,ಜನಪ್ರತಿನಿಧಿಗಳಾಗಲೀ ತಯಾರಿಲ್ಲ, ಬದಲಾಗಿ ದುಬಾರಿ ದಂಡವನ್ನು ಮುಂದಿಟ್ಟು ಬಡಪಾಯಿ ಚಾಲಕರನ್ನು ಹಗಲು ದರೋಡೆ ನಡೆಸುತ್ತಿರುವುದು ತೀರಾ ಖಂಡನೀಯವಾಗಿದೆ" ಎಂದು ಹೇಳಿದರು.
ಡಿವೈಎಫ್ ಐ ರಾಜ್ಯಾಧ್ಯಕ್ಷರಾದ ಮುನಿರ್ ಕಾಟಿಪಳ್ಳ ರವರು ಮಾತನಾಡುತ್ತಾ, " ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಹದಗೆಟ್ಟಿದೆ. ಕನಿಷ್ಠ ಹೊಂಡಗುಂಡಿಗಳನ್ನು ಮುಚ್ಚಲು ಕೂಡ ಹಣ ಬಿಡುಗಡೆಯಾಗದೆ, ರಸ್ತೆಗಳೆಲ್ಲ ಗುಂಡಿಗಳಿಂದಲೇ ತುಂಬಿದೆ.ಪಂಪುವೆಲ್ ಮೇಲ್ಸೇತುವೆಯ ಕಾಮಗಾರಿಯನ್ನು ಮುಗಿಸಲು ನೀಡಿದ ಅಂತಿಮ ಗಡುವು ಹೊಸ ಇತಿಹಾಸವನ್ನೇ ಸ್ರಷ್ಟಿಸಿದೆ.ಜಿಲ್ಲೆಯ ಕೆಲವು ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದಾಗಿ ವಾಗ್ದಾನ ನೀಡಿದ ಸಂಸದ ನಳೀನ್ ಕುಮಾರ್ ಕಟೀಲ್ ರವರು, ಸ್ವತಃ ತಾನು ಮೇಲ್ದರ್ಜೆಗೇರಿದರೆ ಹೊರತು ರಸ್ತೆಗಳನ್ನು ಮೇಲ್ದರ್ಜೆಗೇರಿಸಿಲ್ಲ" ಎಂದು ಕಟುವಾಗಿ ಟೀಕಿಸಿದರು.
ಮೋಟಾರು ವಾಹನ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು ಕಾಯಿದೆಯ ಹಿಂದಿರುವ ಗುಪ್ತ ಅಜೆಂಡಾವನ್ನು ಎಳೆಎಳೆಯಾಗಿ ವಿವರಿಸುತ್ತಾ, "ಕೇವಲ ದಂಡವನ್ನೇ ಪ್ರಧಾನವಾಗಿಟ್ಟುಕೊಂಡು ಒಂದು ಕಡೆ ಜನರಲ್ಲಿ ಗೊಂದಲವನ್ನು ಸ್ರಷ್ಠಿಸಿ,ಮತ್ತೊಂದು ಕಡೆ ಸಮರ್ಥನೆ ಮಾಡುವ ಕೇಂದ್ರ ಸರಕಾರವು ಅಂತಿಮವಾಗಿ ಇಡೀ ದೇಶದ ಸಾರಿಗೆ ರಂಗವನ್ನೇ ಕಾರ್ಪೊರೇಟೀಕರಣಗೊಳಿಸುವ ಮೂಲಕ ಚಾಲಕ ಸಮುದಾಯದ ಬದುಕನ್ನೇ ನಿರ್ನಾಮ ಮಾಡಲು ಹೊರಟಿದೆ" ಎಂದು ಆತಂಕ ವ್ಯಕ್ತಪಡಿಸಿದರು.