ಕುಂದಾಪುರ, ಸೆ 25 (DaijiworldNews/SM): ಬೈಕುಗಳೆರಡು ಪರಸ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒರ್ವ ಸಾವನ್ನಪ್ಪಿ, ಇನ್ನೊಬ್ಬ ಗಂಭೀರ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯಿತಿ ಎದುರು ನಡೆದಿದೆ. ಕೆದೂರು ಸಮೀಪ ಬೈಕ್ ಗ್ಯಾರೇಜ್ ಮಾಲಕ ರಾಮಚಂದ್ರ ಕುಲಾಲ್ ಸಾವನ್ನಪ್ಪಿದ ದುರ್ದೈವಿ. ಹೊಸಮಠ ಅರಳೀಕಟ್ಟೆ ನಿವಾಸಿ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರುಣ್ ಕುಮಾರ್ ಶೆಟ್ಟಿಯವರ ಮಗ ಬೆಂಗಳೂರಿನಿಂದ ಬರುತ್ತಿದ್ದು, ರಾತ್ರಿ 9 ಗಂಟೆ ಸುಮಾರಿಗೆ ತೆಕ್ಕಟ್ಟೆಗೆ ಬಂದಿಳಿದಿದ್ದರು. ತೆಕ್ಕಟ್ಟೆಯಿಂದ ಅವರ ತಂದೆ ಅರುಣ್ ಕುಮಾರ್ ಶೆಟ್ಟಿ ಬೈಕಿನಲ್ಲಿ ಕರೆದುಕೊಂಡು ಬರುತ್ತಿದ್ದರು. ಕೆದೂರು ಗ್ರಾಮ ಪಂಚಾಯಿತಿ ಎದುರು ಬರುತ್ತಿದ್ದಂತೆ ಎದುರಿನಿಂದ ಅತೀ ವೇಗವಾಗಿ ಬರುತ್ತಿದ್ದ ರಾಮಚಂದ್ರ ಕುಲಾಲ್ ಎಂಬಾತ ಅರುಣ್ಕುಮಾರ್ ಶೆಟ್ಟಿಯವರ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ತೀವ್ರತೆಗೆ ಬೈಕ್ ಸವಾರ ರಾಮಚಂದ್ರ ಕುಲಾಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮತ್ತೊಂದು ಬೈಕ್ ಸವಾರ ಅರುಣ್ ಕುಮಾರ್ ಶೆಟ್ಟಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ರಾಮಚಂದ್ರ ಕುಲಾಲ್ ಇತ್ತೀಚೆಗಷ್ಟೆ ಮದುವೆಯಾಗಿದ್ದು ಅವರ ಪತ್ನಿ ತುಂಬು ಗರ್ಭಿಣಿ ಎಂದು ತಿಳಿದುಬಂದಿದೆ. ಇನ್ನು ಅಪಘಾತದಲ್ಲಿ ಬೈಕುಗಳು ನಜ್ಜುಗುಜ್ಜಾಗಿವೆ.
ಕೋಟ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.