Karavali
ಹರಿಕೃಷ್ಣ ಬಂಟ್ವಾಳ್ ಗೆ ಗ್ರಾಮ ಪಂಚಾಯಿತ್ ಚುನಾವಣೆಗೂ ಸ್ಪರ್ಧಿಸುವ ಸಾಮರ್ಥ್ಯ ಇಲ್ಲ- ರೈ
- Mon, Jan 01 2018 10:31:59 AM
-
ಬಂಟ್ವಾಳ ಜ 1 : ಗ್ರಾಮ ಪಂಚಾಯತ್ ಚುನಾವಣೆಗೂ ಸ್ಪರ್ಧಿಸುವ ಸಾರ್ಮಥ್ಯ ಇಲ್ಲದವರು ಆರು ಬಾರಿ ಶಾಸಕನಾಗಿ ಆಯ್ಕೆಯಾದ ನನ್ನ ಬಗ್ಗೆ ಅಪಪ್ರಚಾರ ಮಾಡುವುದಕ್ಕೆ ಉತ್ತರಿಸಲು ಹಾಗೂ ಅಂತಹವರ ಹೆಸರೇಳಲು ನಾಚಿಕೆಯಾಗುತ್ತದೆ. ಅಂತಹವರ ಹೆಸರೇಳಿದರೆ ನನ್ನನ್ನು ಆರು ಬಾರಿ ಶಾಸನ ಸಭೆಗೆ ಕಳಿಸಿದ ನನ್ನ ಮತದಾರ ಪ್ರಭುಗಳಿಗೆ ಮಾಡುವ ಅವಮಾನವಾದೀತು ಎಂದು ನಾನು ಭಾವಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹರಿಕೃಷ್ಣ ಬಂಟ್ವಾಳ ಹೆಸರೆತ್ತದೆ ಅವರ ಆರೋಪಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಭಾನುವಾರ ಬಿ ಸಿ ರೋಡಿನಲ್ಲಿ ನಿರ್ಮಾಣವಾಗಿರುವ ಬಂಟ್ವಾಳ ಕಾಂಗ್ರೆಸ್ ಭವನ ಉದ್ಘಾಟಿಸಿದ ಬಳಿಕ ಬಂಟ್ವಾಳ-ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇತ್ತೀಚೆಗೆ ಶಾಂತಿಗಾಗಿ ಸಾಮರಸ್ಯ ನಡಿಗೆ ಕಾರ್ಯಕ್ರಮಕ್ಕೂ ಮೊದಲು ನಾನು ಜನಾರ್ದನ ಪೂಜಾರಿಯವರನ್ನು ಭೇಟಿಯಾದಾಗ ರೈಗಳೇ ನಮಗೆ ಪ್ರಾಯವಾಗಿದೆ. ಜಾಸ್ತಿ ನಡಿಗೆ ಬೇಡ. ಆರೋಗ್ಯದ ಬಗ್ಗೆ ಗಮನ ಇರಲಿ ಎಂಬ ಪ್ರೀತಿಯ ಸಲಹೆಯನ್ನು ಪೂಜಾರಿಯವರು ನನಗೆ ನೀಡಿದ್ದರು ಎಂದರು. ಅವರ ಪುತ್ರ ದೀಪಕ್ ಸಹಿತ ಅವರ ಮಕ್ಕಳು ಹಾಗೂ ಕುಟುಂಬಿಕರು ಇಂದಿಗೂ ನನ್ನನ್ನು ಕುಟುಂಬ ಸದಸ್ಯರಂತೆ ಗೌರವಭಾವದಿಂದ ಕಂಡು ಮಾತನಾಡಿಸುತ್ತಲೇ ಇದ್ದಾರೆ. ಹೀಗಿದ್ದೂ ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಂದರ್ಭ ಪೂಜಾರಿ ಸೂಚಿಸಿದರೆ ಉಮೇದ್ವಾರಿಕೆ ಹಿಂಪಡಯುತ್ತೀರಾ ಎಂಬ ಪ್ರಶ್ನೆಗೆ , ಪೂಜಾರಿ ಹೇಳಿದ ಮಾತ್ರ ನಾಮಪತ್ರ ವಾಪಾಸು ಪಡೆಯಲು ನಾನೇನು ಅವರ ಚೇಲಾ ಅಲ್ಲ ಎಂದು ಹೀಯಾಳಿಸಿದ ವ್ಯಕ್ತಿ ನನ್ನ ಹಾಗೂ ಪೂಜಾರಿ ಸಂಬಂಧದ ನಡುವೆ ಹುಳಿ ಹಿಂಡುತ್ತಿರುವ ಬಗ್ಗೆ ಈ ಜಿಲ್ಲೆಯ ಪ್ರಜ್ಞಾವಂತ ಜನ ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದು ಹೇಳುತ್ತಾ ಸಚಿವ ರೈ ಅವರು ಗದ್ಗದಿತರಾದರು.
ಸುಮಾರು ಒಂದೂವರೆ ತಾಸುಗಳ ಕಾಲ ಸುದೀರ್ಘ ಭಾಷಣ ಮಾಡಿದ ಸಚಿವ ರೈ ಹರಿಕೃಷ್ಣ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರಲ್ಲದೆ ಪೂಜಾರಿ ವಿರುದ್ದ ವಿನಾ ಕಾರಣ ಎತ್ತಿಕಟ್ಟಿ ರಾಜಕೀಯ ಮಾಡುತ್ತಿರುವ ಬಗ್ಗೆ ಅತೀವ ಭಾವುಕರಾದರು. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭ ಹೈಕಮಾಂಡ್ ಮಂಗಳೂರು ಕ್ಷೇತ್ರದಿಂದ ಎರಡು ಹೆಸರು ಕೇಳಿದರೂ ಜನಾರ್ದನ ಪೂಜಾರಿ ಅವರ ಒಂದೇ ಒಂದು ಹೆಸರು ಶಿಫಾರಸ್ಸು ಮಾಡಿದವ ನಾನು ಎಂದ ಸಚಿವ ರೈ, ಪುತ್ತೂರಿನಲ್ಲಿ ದೇಯಿ ಬೈದಿತಿ ಹೆಸರಿನಲ್ಲಿ ಅರಣ್ಯ ಇಲಾಖೆ ವತಿಯಿಂದ ದೈವೀ ವನ ನಿರ್ಮಾಣ, ಬಿ ಸಿ ರೋಡು ಮುಖ್ಯ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರು ಸೇರಿದಂತೆ ಬಿಲ್ಲವ ಸಮಾಜಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಮನಸಾರೆ ಕೈಗೊಂಡಿದ್ದೇನೆ. ಇಂದಿಗೂ ಜನಾರ್ದನ ಪೂಜಾರಿ ಬಗ್ಗೆ ನನಗೆ ಅತೀವ ಗೌರವ ಇದೆ. ಪೂಜಾರಿ ಬಗ್ಗೆ ಅವಹೇಳನ ಮಾಡಿದ ಬಗ್ಗೆ ಏನಾದರೂ ಪುರಾವೆ ಇದ್ದರೆ ಅಪಪ್ರಚಾರ ನಡೆಸುವವರು ಸಾಬೀತುಪಡಿಸಲಿ ಎಂದು ಸವಾಲೆಸದರು. ಒಂದು ವೇಳೆ ಜನಾರ್ದನ ಪೂಜಾರಿ ಕುಟುಂಬ ಈ ಬಗ್ಗೆ ಸತ್ಯಪ್ರಮಾಣಕ್ಕೆ ನನ್ನನ್ನು ಕರೆದರೆ ತಕ್ಷಣ ನಾನು ಸಿದ್ದನಿದ್ದೇನೆ, ಅದು ಬಿಟ್ಟು ಲೆಕ್ಕಕ್ಕಿಲ್ಲದ ದಾರಿ ಹೋಕರು ಮಾಡುವ ಸವಾಲನ್ನು ನಾನು ಸ್ವೀಕರಿಸುವುದಿಲ್ಲ ಎಂದು ಸಚಿವ ರೈ ಸಾರಿದರು.ಬಿಲ್ಲವರ ಸಮಸ್ಯೆಗೆ ಸ್ಪಂದಿಸದ ಸೋಕಾಲ್ಡ್ ನಾಯಕರು
ಭಾರತಿ ಪೂಜಾರಿ, ಹರೀಶ್ ಪೂಜಾರಿ ಸಹಿತ ಹಲವು ಬಿಲ್ಲವ ಸಮಾಜದ ಅಮಾಯಕರ ಹತ್ಯೆಗಳು ನಡೆದಾಗ ಯಾವುದೇ ಸೋಕಾಲ್ಡ್ ನಾಯಕರು ಹೋರಾಟ ಮಾಡುವ ಮನಸ್ಸು ಮಾಡಿಲ್ಲ. ಇದೀಗ ರಾತ್ರಿ-ಬೆಳಗಾಗುವಷ್ಟರಲ್ಲಿ ನಾಯಕರಾಗಬೇಕೆಂಬ ಕನಸು ಕಂಡು ಬಿಲ್ಲವ ಮುತ್ಸದ್ದಿ ಜನಾರ್ದನ ಪೂಜಾರಿ ಅವರನ್ನು ದಾಳವಾಗಿ ಬಳಸಿ ರಾಜಕೀಯ ಮಾಡುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆ ಎಂದು ಸಚಿವ ರೈ ಹೇಳಿದರು.
ಜಿಲ್ಲೆಯಲ್ಲಿ ಸರಣಿ ಕೊಲೆಗಳು ನಡೆಯಿತು. ಆದರೆ ಯಾವುದೇ ಕೊಲೆ ಪ್ರಕರಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುತಿಸಿಕೊಂಡಿಲ್ಲ ಎಂದ ಸಚಿವ ರೈ ಬ್ಯಾರಿ ಅಕಾಡೆಮಿ ಕಾರ್ಯಕ್ರಮದಲ್ಲಿ ಜಾತ್ಯಾತೀತ ಮುಸ್ಲಿಮರು ಯಾವತ್ತೂ ನನ್ನನ್ನು ಕೈಬಿಟ್ಟಿಲ್ಲ ಎಂದು ಹೇಳಿದ್ದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಯಿತು ಎಂದು ಕಿಡಿಕಾರಿದರು. ಎರಡು ಕೋಮುವಾದಿ ಸಂಘಟನೆಗಳು ನನ್ನ ರಾಜೀನಾಮೆ ಕೇಳುತ್ತಿದೆ. ಇದುವೇ ನನ್ನ ಜಾತ್ಯಾತೀತ ವ್ಯಕ್ತಿತ್ವಕ್ಕೆ ದೊರೆತ ಮನ್ನಣೆ ಎಂದರು.
ಬಂಟ್ವಾಳ ಕಾಂಗ್ರೆಸ್ಸಿಗೆ ಮುಕುಟ :
ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ನೇತೃತ್ವದಲ್ಲಿ ನಿರ್ಮಾಣವಾದ ಬಂಟ್ವಾಳ ಕಾಂಗ್ರೆಸ್ ಭವನ ಇಲ್ಲಿನ ಕಾಂಗ್ರೆಸ್ ಪಾಲಿಗೆ ಒಂದು ಮುಕುಟದಂತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯ ಚಟುವಟಿಕೆ ಇನ್ನಷ್ಟು ಹುಮ್ಮಸ್ಸು ಬರಲು ಕಾರಣವಾಗಿದೆ ಎಂದ ಸಚಿವ ರೈ ಭವನದ ಉಳಿದಿರುವ ಕಾಮಗಾರಿಗಳನ್ನು ನನ್ನ ಸ್ವಂತ ನೆಲೆಯಲ್ಲಿ ನಿರ್ವಹಿಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಮಾವೇಶವನ್ನು ಉದ್ಘಾಟಿಸಿ ಇತ್ತೀಚಿಗಿನ ದಿನಗಳಲ್ಲಿ ಸಚಿವ ರಮಾನಾಥ ರೈ ಅವರ ಬಾಯ್ಮಚ್ಚಿಸುವ ಷಡ್ಯಂತ್ರ ನಡೆಯುತ್ತಿದ್ದು,ಇದಕ್ಕೆ ಕಾರ್ಯಕರ್ತರು ಕೂಡ ಪ್ರತ್ಯುತ್ತರನೀಡಬೇಕೆಂದರು.ಕೆಪಿಸಿಸಿ ಪ್ರಧಾನಕಾರ್ಯದರ್ಶಿಗಳಾದ ಯು.ಬಿ.ವೆಂಕಟೇಶ್,ಎಂ.ಎಲ್.ಮೂರ್ತಿ,ಬಂಟ್ವಾಳ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್,ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್,ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,ಎಂ.ಎಸ್.ಮಹಮ್ಮದ್,ಮಂಜುಳಾ ಮಾವೆ,ಸಾಹುಲ್ ಹಮೀದ್,ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ,ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು,ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ,ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಬ್ಲಾಕ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲ್ಯಾನ್,ಅಬ್ಬಾಸ್ ಆಲಿ,ಮಲ್ಲಿಕಾ ಶೆಟ್ಟಿ,ಜಯಂತಿ ಪೂಜಾರ್ತಿ, ಪಕ್ಷದ ಪ್ರಮುಖರಾದ ರಾಜಶೇಖರ ನಾಯಕ್,ಪ್ರಶಾಂತ ಕುಲಾಲ್,ಮಲ್ಲಿಕಾ ಪಕಳ,ಪದ್ಮನಾಭ ರೈ,ಲುಕ್ಮಾನ್,ರಮಾನಾಥ ವಿಟ್ಲ,ಐಡಾ ಸುರೇಶ್,ಜಿನರಾಜ ಅರಿಗ,ಉಮ್ಮರ್ ಪಜೀರ್,ಸದಾಶಿವ ಶೆಟ್ಟಿ,ರಫೀಕ್ ಮೊದಲಾದವರು ವೇದಿಕೆಯಲ್ಲಿದ್ದರು.ಇದೇ ವೇಳೆ ಬಿಜೆಪಿ ತೊರದ ವಿವಿಧ ಗ್ರಾಮಗಳ ನೂರಾರು ಮಂದಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.