ಮಂಗಳೂರು, ಸೆ 26 (Daijiworld News/RD): ಕರಾವಳಿಯಲ್ಲಿ ಕೆಲ ದಿನಗಳಿಂದ ಕೊಂಚ ಬಿಡುವುಗೊಂಡ ಮಳೆರಾಯ ಇದೀಗ ಮತ್ತೆ ಚುರುಕುಗೊಂಡಿದ್ದು, ಬುಧವಾರ ಸಂಜೆಯಿಂದ ಸುರಿಯುತ್ತಿರುವ ಮಳೆ ಗುರುವಾರವೂ ಮುಂದುವರಿಯುತ್ತಿದ್ದು ನಗರದ ಹಲವೆಡೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಈಗಾಗಲೇ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಆಲರ್ಟ್ ಘೋಷಿಸಿದ್ದು, 115.6 ಮಿಲಿ ಮೀಟರ್ ನಿಂದ 204.4. ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಇದೀಗ ನಗರದ ಹಲವೆಡೆ ಮಳೆಯಾಗಿದ್ದು, ರಸ್ತೆಯು ಜಲಾವೃತಗೊಂಡಿದ್ದು ಶಾಲಾ ಮಕ್ಕಳು, ಪ್ರಯಾಣಿಕರು ಪರದಾಡುವಂತೆ ಆಗಿದೆ.
ಕರಾವಳಿ ಭಾಗದಲ್ಲಿ ಈ ಭಾರೀಯ ಮುಂಗಾರು ಸಾಧಾರಣವಾಗಿತ್ತು. ಜೂನ್ 1 ರಿಂದ ಈ ವರೆಗೆ ದ.ಕ.ಜಿಲ್ಲೆಯಲ್ಲಿ 3,345.70 ಮಿಲಿ ಮೀಟರ್ ವಾಡಿಕೆಯ ಮಳೆಯಲ್ಲಿ 3, 265. 37 ಮಿಲಿ ಮೀಟರ್ ಮಳೆಯಾಗಿ ಶೇ. 2 ರಷ್ಟು ಮಳೆಯ ಕೊರತೆ ಇದೆ. ಒಟ್ಟಾರೆಯಾಗಿ ಕರಾವಳಿ ಭಾಗದಲ್ಲಿ ವಾಡಿಕೆಗಿಂತ 26 ರಷ್ಟು ಮಳೆಯ ಪ್ರಮಾಣ ಹೆಚ್ಚಳವಾಗಿದೆ. ಹವಾಮಾನ ಇಲಾಖೆ ವಾಡಿಕೆಯಂತೆ ಈ ತಿಂಗಳ ಅಂತ್ಯಕ್ಕೆ ಮುಂಗಾರು ಕೊನೆಗೊಳ್ಳಲಿದೆ.