ಮಂಗಳೂರು, ಸೆ 26 (DaijiworldNews/SM) : ನಗರ ಹೊರವಲಯದ ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆ ಹಾಗೂ ಶಿಶು ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂಗಳೂರು ನಗರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಮಂಜೊಟ್ಟಿ, ಗುಂಡಳಿಕೆ, ಶಕ್ತಿನಗರ ಮತ್ತು ಆದರ್ಶನಗರದ ಅಂಗನವಾಡಿ ಕೇಂದ್ರಗಳಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮದಡಿ ಪೌಷ್ಟಿಕ ಆಹಾರ ಸಪ್ತಾಹ ನಡೆಯಿತು.
ಗರ್ಭಿಣಿ, ಬಾಣಂತಿ ಹಾಗೂ ಹಸುಳೆ ಸೇವಿಸಬೇಕಾದ ಪೌಷ್ಟಿಕ ಆಹಾರ ಮತ್ತು ಸೇವಿಸಬಾರದಂತಹ ಆಹಾರ ಉತ್ಪನ್ನಗಳ ಬಗ್ಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ ಆಶಾ ಪಾರ್ವತಿ ಹಾಗೂ ಮಕ್ಕಳ ತಜ್ಞೆ ಡಾ. ಸೌಮ್ಯ ಪ್ರಿಯದರ್ಶಿನಿ ಮಾಹಿತಿಯನ್ನು ನೀಡಿದರು. ಸಮತೋಲನ ಆಹಾರ ಪದ್ಧತಿಯಂತೆ ನೈಸರ್ಗಿಕವಾಗಿ ಲಭ್ಯವಿರುವ ಯಾವ ಯಾವ ಹಣ್ಣು-ತರಕಾರಿ, ಬೇಳೆ-ಕಾಳು, ಧವಸ-ಧಾನ್ಯ, ಹಾಲಿನ ಉತ್ಪನ್ನಗಳು, ಮೊಟ್ಟೆ-ಮಾಂಸಗಳಲ್ಲಿ ಯಾವ ಯಾವ ಪೌಷ್ಟಿಕಾಂಶಗಳಾದ ಪಿಷ್ಠ, ಪ್ರೋಟೀನ್, ವಿಟಮಿನ್, ಖನಿಜ-ಲವಣಾಂಶಗಳು ಎಷ್ಟರಮಟ್ಟಿಗೆ ಇದೆ ಮತ್ತು ಯಾರು ಯಾರು ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಲು ಸಾಧ್ಯ ಎಂದು ವಿವರಿಸಿದರು.
ಮನೆಯಲ್ಲಿ ತಯಾರಿಸಿ ತಂದ ಪೌಷ್ಟಿಕ ಆಹಾರ ಉತ್ಪನ್ನಗಳ ಪ್ರದರ್ಶನ ನಡೆಸಲಾಯಿತು ಮತ್ತು ಅತ್ಯುತ್ತಮ ಪೌಷ್ಟಿಕ ಆಹಾರ ತಯಾರಿಸಿದ ಮಹಿಳೆಯರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಶಾರದಾ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳ ಸಮಾಜಮುಖಿ ಸೇವೆಗಳ ಬಗ್ಗೆ ಯೋಜನಾಧಿಕಾರಿ ವಿಕ್ರಮ್ ಕುಂಟಾರ್ ಮಾಹಿತಿ ನೀಡಿದರು. ಅಭಿಯಾನವನ್ನು ಆಯೋಜಿಸಿ, ಶಿಶು ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಕುರಿತು ಮೇಲ್ವಿಚಾರಕಿ ಸುಧಾ ಕೆ. ಮತ್ತು ಪೂರ್ಣಿಮಾ ಬಿ. ಮಾಹಿತಿ ನೀಡಿದರು.
ಮಂಜೊಟ್ಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವವಾಹಿನಿ ಘಟಕದ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಕಟ್ಟಡ ಸಮಿತಿಯ ಮಹಮ್ಮದ್ ಅತಿಥಿಗಳಾಗಿದ್ದರೆ, ಗುಂಡಳಿಕೆಯಲ್ಲಿ ಮಾಜಿ ಕಾರ್ಪೊರೇಟರ್ ರೂಪಾ ಡಿ. ಬಂಗೇರ ಅತಿಥಿಯಾಗಿದ್ದರು. ಶಕ್ತಿನಗರದಲ್ಲಿ ಮಾಜಿ ಕಾರ್ಪೊರೇಟರ್ ಶಕಿಲಾ ಕಾವ ಮತ್ತು ಆದರ್ಶ ನಗರದಲ್ಲಿ ಮಾಜಿ ಮೇಯರ್ ರಜನೀಶ್ ಕಾಪಿಕಾಡ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.