ಮಂಗಳೂರು ಜ 1: ಹೊಸ ವರ್ಷದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಲು ಚಿತ್ರೋತ್ಸವ ಬಂದಿದೆ .ನಗರದಲ್ಲಿ ನಡಿತಾ ಇರೋ ಪ್ರಪ್ರಥಮ ತುಳು ಚಲನಚಿತ್ರೋತ್ಸವಕ್ಕೆ ಕರಾವಳಿಯ ಬಣ್ಣದ ಲೋಕ ಸಜ್ಜಾಗಿದೆ. ಜನವರಿ 5ರಿಂದ 11ರವರೆಗೂ ಏಳು ದಿನಗಳ ಕಾಲ ನಡೆಯಲಿರುವ ಚಿತ್ರೋತ್ಸವದಲ್ಲಿ ಬ್ಯಾಕ್ ಅಂಡ್ ವೈಟ್ ತುಳು ಸಿನಿಮಾದಿಂದ ಹಿಡಿದು ಇತ್ತಿಚೀಗೆ ಬಿಡುಗಡೆಯಾದ ಚಿತ್ರ ಗಳು ಕೂಡಾ ಪ್ರದರ್ಶನ ಕಾಣಲಿದೆ.
ತುಳು ಚಿತ್ರಗಳ ಪಾಲಿಗೆ ಮಹತ್ತರ ಘಟ್ಟ ತುಳು ಚಲನಚಿತ್ರೋತ್ಸವ ಎಂದರೆ ಖಂಡಿತಾ ತಪ್ಪಾಗಲಾರದು. ತುಳು ಚಿತ್ರ ನಿರ್ಮಾಪಕರ ಸಂಘವು, ಈ ತುಳು ಚಿತ್ರೋತ್ಸವವನ್ನು ಆಯೋಜಿಸಲು ಉದ್ದೇಶಿಸಿದ್ದು, ಮಂಗಳೂರಿನ ಸಿಟಿ ಸೆಂಟರ್ ನ ಸಿನಿ ಪೊಲೀಸ್ ಮಲ್ಟಿಪ್ಲೆಕ್ಸ್ ಹಾಗೂ ಬಲ್ಮಠ ವೃತ್ತ ಬಳಿಯ ಡಾನ್ ಬಾಸ್ಕ್ ಸಭಾಂಗಣದಲ್ಲಿ ಆಯೋಜಿತವಾಗಿದೆ. ಎರಡು ಸ್ಕ್ರೀನ್ ನಲ್ಲಿ ತುಳು ಸಿನಿಮಾ ಪ್ರದರ್ಶನವಾಗಲಿದ್ದು ದಿನವೊಂದಕ್ಕೆ ಸುಮಾರು 7 ರಿಂದ 8 ಸಿನಿಮಾಗಳು ಪ್ರದರ್ಶನ ಆಗಲಿದೆ. ಬೆಳಗ್ಗೆ ಯಾವ ಸಿನಿಮಾ, ಸಂಜೆ ಯಾವ ಸಿನಿಮಾ, ಅನ್ನುವ ಬಗ್ಗೆ ನಿರ್ಧರಿಸುವ ಬಗ್ಗೆ ಕಷ್ಟವಾದ್ದರಿಂದ ಚೀಟಿ ಎತ್ತುವ ಮೂಲಕ ಶೆಡ್ಯೂಲ್ ನಿರ್ಧಾರವಾಗಿದೆ. ಹೀಗಾಗಿ ಯಾರಿಗೂ ಗೊಂದಲ -ನೋವುಂಟಾದಂತೆ ನಡೆದುಕೊಳ್ಳುವುದು ನಿರ್ಮಾಪಕರ ಸಂಘದ ತೀರ್ಮಾನ.
ತುಳುವಿನ ಪ್ರಥಮ ಚಿತ್ರ "ಎನ್ನ ತಂಗಡಿ', "ಬಂಗಾರ್ ಪಟ್ಲೆರ್'ನಂತಹ ಹಳೆಯ ಮತ್ತು ಜನಪ್ರಿಯ ಚಿತ್ರಗಳನ್ನು ಸಿನಿ ಪ್ರೀಯರಿಗೆ ತೋರಿಸುವ ಆಸೆ ಇತ್ತಾದರೂ ಅವೆಲ್ಲಾ ನೆಗೆಟಿವ್ನಲ್ಲೇ ಇರೋ ಕಾರಣ ಚಿತ್ರ ಪ್ರದರ್ಶನಕ್ಕೆ ತೊಡಕಾಗಿದೆ. ಆದರೂ ಬಂಗಾರ್ದ ಕುರಲ್, ಉಡಲ್ಡ ತುಡರ್, ಕಂಚಿಲ್ದ ಬಾಲೆ, ಕೋಟಿ ಚೆನ್ನಯ ಪೆಟ್ಟಾಯಿ ಪಿಲಿ , ಬೊಳ್ಳಿದೋಟ, ಬೈಯ್ಯ ಮಲ್ಲಿಗೆ ಹೀಗೆ ಸುಮಾರು 25 ಸಿನಿಮಾಗಳು ಹಳೆಯ ಚಿತ್ರಗಳು, ಪ್ರದರ್ಶನ ಕಾಣಲಿದೆ. ಇದರೊಂದಿಗೆ ಪ್ರಶಸ್ತಿ ವಿಜೇತ ಚಿತ್ರಗಳಷ್ಟೇ ಅಲ್ಲದೆ, ಯಶಸ್ವಿಯಾದ ಹಲವು ಚಿತ್ರಗಳೂ ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ.
ಒಟ್ಟಾರೆಯಾಗಿ ತುಳು ಚಲನಚಿತ್ರೋತ್ಸವದಲ್ಲಿ 49 ಸಿನಿಮಾಗಳ ಪ್ರದರ್ಶನ ನಡೆಯಲಿದ್ದು ತುಳು ಚಿತ್ರರಂಗ ಅನುಭವಿಸುತ್ತಿರುವ ಥಿಯೇಟರ್ ಸಮಸ್ಯೆ , ಹಾಗೂ ಇನ್ನಿತರ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ಚಿತ್ರೋತ್ಸವ ಒಂದು ವೇದಿಕೆಯಾಗೋದಂತು ಸತ್ಯ. ಇದೆಲ್ಲದರ ಜತೆಗೆ ಸಿನಿಪ್ರೀಯರು ಜನವರಿ ಮೊದಲ ಸಪ್ತಾಹವನ್ನು ನೀವು ಸಿನಿಮಾಕ್ಕಾಗಿಯೇ ಮೀಸಲಿಡುವುದು ಒಳಿತು.