ಉಡುಪಿ, ಸೆ 26 (Daijiworld News/MSP): ಉಡುಪಿ, ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ಸೊಂದು ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಅಪಾಯಕಾರಿಯಾದ ರೀತಿಯಲ್ಲಿ ಹೇರಿಕೊಂಡು ಸಂಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಸ್ ಚಾಲಕನಿಗೆ ನ್ಯಾಯಾಲಯವು 13,500 ರೂಪಾಯಿ ದಂಡ ವಿಧಿಸಿದೆ.
ಸೆ. ೨೧ ರ ರಾತ್ರಿ 9.30 ಗಂಟೆಗೆ ಉಡುಪಿ – ಮಂಗಳೂರು ಮಾರ್ಗವಾಗಿ ಸಂಚರಿಸುವ ಕೆಎ 20 ಬಿ 6657 ನೇ ಖಾಸಗಿ ಬಸ್ಸಿನಲ್ಲಿ ಜನರು ಪುಟ್ ಬೋರ್ಡ್, ಹಿಂಭಾಗದ ಏಣಿಯಲ್ಲಿ ಮತ್ತು ಮೇಲ್ಬಾಗದಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ಬಗ್ಗೆ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಸೆ.೨೫ ರಂದು ಪೊಲೀಸರು, "ನಿಯಮ ಉಲ್ಲಂಘಿಸಿ ಹೆಚ್ಚಿನ ಜನರನ್ನು ಸಾಗಿಸುತಿದ್ದ, ಪುಟ್ ಬೋರ್ಡನಲ್ಲಿ ಮತ್ತು ಬಸ್ಸಿನ ಹಿಂಭಾಗ ಹಾಗೂ ಮೇಲ್ಬಾಗಗಳಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಬಗ್ಗೆ ದುಡುಕುತನ ಮತ್ತು ನಿರ್ಲಕ್ಷ್ಯತನದ ಚಾಲನೆ ಹಾಗೂ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಬಸ್ಸನ್ನು ಚಲಾಯಿಸಿದ ಬಗ್ಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅಲ್ಲದೆ ಬಸ್ಸನ್ನು ವಶಪಡಿಸಿಕೊಂಡ ಪೊಲೀಸರು ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ,ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಾತ್ರವಲ್ಲದೆ ಪೊಲೀಸರು , ಬಸ್ಸಿನ ಚಾಲಕ ಶೈಲೇಶ್ ಇವರ ಡ್ರೈವಿಂಗ್ ಲೈಸನ್ಸ್ ಅಮಾನತು ಪಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಶಿಫಾರಸ್ಸು ಮಾಡಿದ್ದಾರೆ ಜೊತೆಗೆ ಬಸ್ಸಿನ ಮಾಲಕರಿಗೆ ಈ ಘಟನೆ ಪುನಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ನೋಟೀಸು ನೀಡಿದ್ದಾರೆ.