ಬೆಳ್ತಂಗಡಿ, ಸೆ 26 (DaijiworldNews/SM): ಬುಧವಾರ ನದಿಗಳಲ್ಲಿ ಉಕ್ಕಿದ ನೀರಿನೊಂದಿಗೆ ಬಂದಿದ್ದ ಹೂಳು ಮತ್ತೆ ತೋಟಗಳನ್ನು ಆವರಿಸಿದೆ. ದಿಡುಪೆ ಕುಕ್ಕಾವು ಪರಿಸರದಲ್ಲಿ ಪ್ರವಾಹದ ಬಳಿಕ ತಾತ್ಕಾಲಿಕವಾಗಿ ಹೊಸದಾಗಿ ನಿರ್ಮಿಸಿದ್ದ ಕೆಲ ರಸ್ತೆಗಳು ಮತ್ತೇ ನೀರಿನಲ್ಲಿ ಕೊಚ್ಚಿ ಹೋಗಿದೆ.
ಪಶ್ವಿಮ ಘಟ್ಟದಲ್ಲಿ ಬಾರೀ ಮಳೆಯಾಗಿದ್ದರಿಂದ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿಯ ಉಪನದಿಗಳಲ್ಲಿ ಹಾಗೂ ಮೃತುಂಜಯ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಬುಧವಾರ ಸಂಜೆ ಜನರಲ್ಲಿ ಒಮ್ಮೆ ಆತಂಕ ಸೃಷ್ಟಿಯಾಗಿದ್ದರೂ ಗುರುವಾರ ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಆದರೆ ಹೊಳೆ ಬದಿಯಲ್ಲಿರುವ ತೋಟಗಳಿಗೆ ನೀರು ನುಗಿದ್ದರಿಂದ ಮತ್ತೆ ಕೃಷಿ ಭೂಮಿಯಲ್ಲಿ ಮರಳು ತುಂಬಿಕೊಂಡಿದೆ.
ಕಳೆದ ಮೂರಾಲ್ನಾಕು ದಿನಗಳಿಂದ ತಾಲೂಕಿನಲ್ಲಿ ಸಾಕಷ್ಟು ಮಳೆ ಇರಲಿಲ್ಲ. ಬಿಸಿಲು ಹಾಗೂ ಮಳೆ ಇದ್ದರೂ ಬುಧವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ತಾಲೂಕಿನಲ್ಲಿ ಸಣ್ಣ ಮಟ್ಟದಲ್ಲಿ ಮಳೆ ಆರಂಭವಾಗಿತ್ತು. ಆದರೆ ಚಾರ್ಮಾಡಿ ಹಾಗೂ ದಿಡುಪೆ ಪ್ರದೇಶದ ನದಿ, ಹಳ್ಳಗಳಲ್ಲಿ ಮಾತ್ರ ನೀರು ಏಕಾಏಕಿಯಾಗಿ ಏರಿಕೆಯಾಗಿತ್ತು. ಸಂಜೆಯ ವೇಳೆ ಸುರಿದ ಭಾರೀ ಮಳೆಗೆ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಮಲವಂತಿಗೆ ಗ್ರಾಮದ ದಿಡುಪೆಯ ಬಾಳೆಹಿತ್ತಿಲು, ನೆಕ್ಕಿಲು, ಪುಣ್ಕೆದಡಿ, ದಡ್ಡುಗದ್ದೆ, ತೆಂಗೆತ್ತಮಾರು. ಮಿತ್ತಬಾಗಿಲು ಗ್ರಾಮದ ಕುಕ್ಕಾವು ಹಾಗೂ ಚಾರ್ಮಾಡಿಯ ಫರ್ಲಾಣಿ, ಅಂತರ, ಕೊಳಂಬೆ, ನಳ್ಳಿಲುಗಳಲ್ಲಿ ನದಿ, ಹಳ್ಳಗಳಲ್ಲಿ ನೀರಿನಮಟ್ಟ ಏಕಾಏಕಿ ಏರಿಕೆಯಾಗಿ, ತೋಟಗಳಿಗೆ ಮತ್ತೆ ನೀರು ನುಗ್ಗಿತ್ತು. ರಾತ್ರಿಯ ವೇಳಗೆ ನೀರಿನ ಮಟ್ಟ ಇಳಿಕೆಯಾಗಿ ಜನರು ನಿಟ್ಟುಸಿರು ಬಿಡುವಂತಾಗಿತ್ತು.
ಪ್ರವಾಹದ ಬಳಿಕ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ ಮೊದಲಾದ ಕಡೆಗಳಲ್ಲಿ ವಿವಿಧ ಸಂಘಸಂಸ್ಥೆಗಳು, ನಾನಾ ತಾಲೂಕುಗಳ ವಿದ್ಯಾರ್ಥಿಗಳು, ಸಾವಿರಾರು ಮಂದಿ ಸ್ವಯಂಸೇವರು, ಸಾರ್ವಜನಿಕರು ಪ್ರವಾಹ ಬಾಧಿತ ಪ್ರದೇಶದಲ್ಲಿ ಶ್ರಮದಾನ ನಡೆಸಿದ್ದರು. ಚಾರ್ಮಾಡಿಯ ಕೊಳಂಬೆ ಹಾಗೂ ಅಂತರದಲ್ಲಿ ಉಜಿರೆಯ ರಾಜೇಶ್ ಪೈ ಹಾಗೂ ಮೋಹನ್ ಕುಮಾರ್ ನೇತೃತ್ವದ ಉದ್ಯಮಿಗಳ ತಂಡ ಇಲ್ಲಿನ ಜನರಿಗೆ ಬದುಕು ಕಟ್ಟುವ ಕೆಲಸಕ್ಕೆ ಕೈಜೋಡಿಸಿದ್ದರು. ಈ ಪರಿಸರದಲ್ಲಿ ತೋಟಗಳಿಗೆ ನುಗ್ಗಿದ ಮರಳುಗಳ ತೆರವು, ಮನೆಗಳ ಸ್ವಚ್ಚತೆ ಕಾರ್ಯ ಹಾಗೂ ಬಾರೀ ಗಾತ್ರಗಳ ಮರಗಳ ತೆರವು ಕಾರ್ಯ ಮಾಡಿದ್ದರು. ಇನ್ನೂ ಮಾಡುತ್ತಲೇ ಇದ್ದಾರೆ. ಆದರೆ ಬುಧವಾರ ಈ ಪ್ರದೇಶದ ತೋಟಗಳಿಗೆ ಮತ್ತೆ ನದಿಯ ಹೂಳು ನುಗ್ಗಿರುವುದು ಇಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಅದೇ ರೀತಿ ದಿಡುಪೆ ಹಾಗೂ ಕುಕ್ಕಾವಿನಲ್ಲಿಯೂ ಶಾಸಕ ಹರೀಶ ಪೂಂಜ ಹಾಗೂ ತಾಲೂಕಾಡಳಿತದಿಂದ ನಿರ್ವಹಿಸಿದ ತುರ್ತು ಕಾಮಗಾರಿಗಳಿಗೂ ಹಾನಿಯಾಗಿದೆ.