ಕಾರ್ಕಳ, ಸೆ 28 (Daijiworld News/RD): ಪುರಸಭೆಯ ಅನುಮತಿ ಪಡೆಯದೇ ಪುರಸಭೆಯ ಬೊಕ್ಕಸಕ್ಕೆ ಸಲ್ಲಬೇಕಾದ ರೂ.4.50 ಲಕ್ಷ ಶುಲ್ಕ ಪಾವತಿಸದೇ ಸಾರ್ವಜನಿಕ ಸಂಪರ್ಕ ರಸ್ತೆಯ ಪಾಶ್ವದಲ್ಲಿ ಫೈಬರ್ ಕೇಬಲ್ ವಯರ್ ಅಳವಡಿಸುತ್ತಿದ್ದ ಕಾಮಗಾರಿಗೆ ಪುರಸಭಾ ಮುಖ್ಯಾಧಿಕಾರಿ ತಡೆಯೊಡ್ಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಂಡಿರುವ ಮುಖ್ಯಾಧಿಕಾರಿ ಘಟನಾ ಸ್ಥಳದಲ್ಲಿ ಕಾಮಗಾರಿಗೆ ಬಳಸಲಾಗಿದ್ದ ಪರಿಕರ ಹಾಗೂ ಯಂತ್ರೋಪಕರಣಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಶುಕ್ರವಾರ ಅನೆಕೆರೆ ರಂಗನಾಥ ಕೆಫೆ ಮುಂಭಾಗ ಖಾಸಗಿ ಮೊಬೈಲ್ ನೆಟ್ವರ್ಕ್ಗೆ ಸಂಬಂಧಿಸಿದ ಕಾಮಗಾರಿ ನಡೆಸಲಾಗುತ್ತಿತ್ತು. ಪುರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದೇ ರಸ್ತೆ ಕೊರೆಯುವ ಯಂತ್ರವನ್ನು ರಸ್ತೆಗೆ ಅಡ್ಡವಾಗಿರಿಸಿ ಕಾಮಗಾರಿ ಮುಂದುವರಿಸಿದ್ದರು. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನಾ ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ ಅಗಮಿಸಿದರು. ಒಂದೆಡೆಯಲ್ಲಿ ಮಳೆಯಿಂದಾಗಿ ರಸ್ತೆ ಕೆಟ್ಟು ಹೋಗಿರುವುದು ಮತ್ತೊಂದೆಡಯಲ್ಲಿ ಕಾನೂನು ಬಾಹಿರ ಕಾಮಗಾರಿಯಿಂದ ನಾಗರಿಕ ಆಕ್ರೋಶಕ್ಕೆ ಪುರಸಭಾ ಆಡಳಿತ ವರ್ಗ ತುತ್ತಾಗಬೇಕಾಗುತ್ತದೆ ಎಂದು ಕಾಮಗಾರಿಯ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡರು.
ಘಟನಾ ಸ್ಥಳಕ್ಕೆ ಅಗಮಿಸಿದ ಪೊಲೀಸರಿಗೆ ಅಕ್ರಮ ಕಾಮಗಾರಿ ಎಸಗುತ್ತಿದ್ದ ಪುರಸಭೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಕೂಡಲೇ ಮುಖ್ಯಾಧಿಕಾರಿ, ಪರಿಸರ ಅಭಿಯಂತರ ಮದನ್, ಮಂಜುನಾಥ ಕೆ.ಎಸ್ ಸ್ಥಳಕ್ಕೆ ಅಗಮಿಸಿದ್ದಾರೆ. ಬಳಿಕ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ.
ಕಾಮಗಾರಿಗೆ ಬಳಸಲಾದ ಪರಿಕರಗಳನ್ನು ವಶಕ್ಕೆ ಪಡೆದು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. ಗುತ್ತಿಗೆದಾರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಪುರಸಭಾ ಮುಖ್ಯಾಧಿಕಾರಿ ಮೇಬಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.