ಕಡಬ, ಸೆ 28 (Daijiworld News/MSP): ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಹಾಗೂ ಇತರ ಕೆಲವು ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಫೇಸ್ಬುಕ್ನಲ್ಲಿ ಸಂದೇಶ ಪೋಸ್ಟ್ ಮಾಡಿದ ಆರೋಪದಲ್ಲಿ ಜೆಡಿಎಸ್ ಯುವ ಮುಖಂಡನೊಬ್ಬನನ್ನು ಕಡಬ ಪೊಲೀಸರು ವಶಕ್ಕೆ ಪಡೆದು ಬಳಿಕ ರಾಜಿ ಪಂಚಾಯಿತಿಕೆಯಲ್ಲಿ ಪ್ರಕರಣ ಇತ್ಯರ್ಥಪಡಿಸಿದ ಘಟನೆ ನಡೆದಿದೆ.
ಪೊಲೀಸ ವಶಕ್ಕೆ ಪಡೆದ ವ್ಯಕ್ತಿಯನ್ನು ರೆಂಜಿಲಾಡಿ ಗ್ರಾಮದ ನಿವಾಸಿ, ನಿವೃತ್ತ ಪೊಲೀಸ್ ಸಿಬ್ಬಂದಿ ಹರಿಪ್ರಸಾದ್ ಎನ್ಕಾಜೆ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಕಡಬ ತಾಲೂಕು ಜೆಡಿಎಸ್ ಪದಾಧಿಕಾರಿಯಾಗಿರುವ ಹರಿಪ್ರಸಾದ್ ಅವರು ಪ್ರಧಾನಿ ಮೋದಿ ಯುವತಿಯೊಂದಿಗೆ ಇರುವ ಭಾವತ್ರವನ್ನು ರವಾನಿಸಿದ್ದು ಅಲ್ಲದೆ ಆರ್ಎಸ್ಎಸ್ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ್ದರು.
ಈ ವಿಚಾರ ಬಿಜೆಪಿ ಮುಖಂಡರಿಗೆ ತಿಳಿಯುತ್ತಿದ್ದಂತೆ, ಈ ಬಗ್ಗೆ ಬಿಜೆಪಿ ಮುಖಂಡ ಪ್ರಕಾಶ್ ಎನ್.ಕೆ. ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಹರಿಪ್ರಸಾದ್ ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದರು.ಈ ಸಂದರ್ಭ ಹಲವು ಮುಖಂಡರು ಠಾಣೆಗೆ ಆಗಮಿಸಿ ಆರೋಪಿ ಹರಿಪ್ರಸಾದ್ಗೆ ಬುದ್ಧಿ ಮಾತು ಹೇಳಿದ ಬಳಿಕ ಕೇಸು ವಾಪಸ್ ಪಡೆಯಲಾಯಿತು. ಈ ಸಂದರ್ಭ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಯಿತು.
ಆ ನಂತರ ಹರಿಪ್ರಸಾದ್ ಅವರು ಕಡಬ ಶ್ರೀ ದುರ್ಗಂಬಿಕಾ ದೇವಸ್ಥಾನಕ್ಕೆ ಬಂದು ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದರು. ಈ ವಿಡೀಯೋ ಇದೀಗ ವೈರಲ್ ಆಗಿದೆ.