ಬಂಟ್ವಾಳ ಜ 1 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಟ್ಟ ಕಡೆ ಕೋಮುಗಲಭೆ ನಡೆಯುತ್ತಿದೆ.ಜಿಲ್ಲೆಯಲ್ಲಿ ಶಾಂತಿ ನೆಲಸಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಗೆ ಬಾರದೇ ಇದ್ರೆ ಒಳ್ಳೆಯದು ಎಂದು ಹಿ.ಜಾ.ವೇ.ಯ ಪ್ರಾಂತ ಕಾರ್ಯದರ್ಶಿ ರಾಧಾಕ್ರಷ್ಣ ಅಡ್ಯಂತಾಯ ಹೇಳಿದ್ದಾರೆ. ಜ ೧ ರ ಸೋಮವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಅವರು ಜಿಲ್ಲೆಗೆ ಬಂದಾಗ ಶರತ್ ಮಡಿವಾಳ ಕೊಲೆ,ಹಾಗೆಯೇ ಹೊನ್ನಾವರಕ್ಕೆ ಕಾಲಿಟ್ಟಾಗ ಮೇಸ್ತಾ ಕೊಲೆಗಳು ನಡೆದಿವೆ ಈ ಹಿನ್ನಲೆಯಲ್ಲಿ ಅವರು ಜಿಲ್ಲೆಗೆ ಕಾಲಿಡುವುದೇ ಬೇಡ ಎಂದರು.
ನಿರಂತರವಾಗಿ ಹಿಂ.ಜಾ.ವೇ.ಮತ್ತು ಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡು ಅವರಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಅಟ್ಟುವ ಮೂಲಕ ಸರಕಾರ,ಜಿಲ್ಲಾ ಉಸ್ತುವಾರಿ ಸಚಿವರು ಹಿಂದು ಪರ ಹೋರಾಟಗಾರರ ಹುಟ್ಟಡಗಿಸುವ ಷಡ್ಯಂತ್ರವನ್ನು ರೂಪಿಸುತ್ತಿದ್ದು,ಇದರ ಭಾಗವಾಗಿ ರತ್ನಾಕರ ಶೆಟ್ಟಿ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ಆರೋಪಿಸಿದರು.ಜಿಲ್ಲೆಯಲ್ಲಿ ಕೊಲೆ,ಗೂಂಡಾ,ಡ್ರಗ್,ಸೆಕ್ಸ್ ಮಾಫಿಯಾ,ಗಾಂಜಾ ಹಾಗೂ ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದೆ ಇದನ್ನು ಹತ್ತಿಕ್ಕಲು ಸಾಧ್ಯವಾಗದ ಜಿಲ್ಲಾಡಳಿತ,ಪೊಲೀಸ್ ಇಲಾಖೆ ಈ ದಂಧೆಯ ವಿರುದ್ದ ಹೋರಾಟ ಮಾಡುವ ನಾಯಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಗಡೀಪಾರಿನಂತಹ ಶಿಕ್ಷೆಯನ್ನು ನೀಡುತ್ತಿದೆ. ರತ್ನಾಕರ ಶೆಟ್ಟಿಯನ್ನು ಯಾವ ಮಾನದಂಡದಲ್ಲಿ ಗಡೀಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಉತ್ತರಿಸಬೇಕು ಎಂದು ಆಗ್ರಹಿಸಿದ ಅವರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಇಬ್ಬಗೆ ನೀತಿಯನ್ನು ಖಂಡಿಸಿದರು. ರತ್ನಾಕರ ಶೆಟ್ಟಿ ಮೇಲಿನ ಎಲ್ಲಾ ಕೇಸುಗಳು ನ್ಯಾಯಾಲಯದಲ್ಲಿ ಖುಲಾಸೆಯಾಗಿದ್ದು, ಇವರು ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಸ್ಪಷ್ಟ ಪಡಿಸಿದ ಅಡ್ಯಂತಾಯ ಅವರು ಸಿದ್ದರಾಮಯ್ಯ ಸರಕಾರದಲ್ಲಿ ನ್ಯಾಯ ದೇವತೆ ಕುರುಡಾಗಿರುವುದು ಈಗ ಜಗಜ್ಜಾಹೀರಾಗಿದೆ ಎಂದರು.
ಜಿಲ್ಲೆಯಲ್ಲಿ ಕೋಮು ಗಲಭೆ,ಗೊಂದಲಗಳಿಗೆ ಸಿಮಿ ಸಂಘಟನೆಯೊಂದಿಗೆ ಪಿಎಫ್ಐ,ಕೆಎಫ್ ಡಿ ಸಂಘಟನೆಯಿಂದ ಅರಾಜಕತೆ ಸೃಷ್ಟಿಯಾಗುತ್ತಿದೆ.ಸರಕಾರ,ಉಸ್ತುವಾರಿ ಸಚಿವರು ಸಮಾಜಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಈ ಸಂಘಟನೆಯ ವಿರುದ್ದ ಕ್ರಮಕೈಗೊಳ್ಳುವ ಬದಲು ಸಂಘಪರಿವಾರದ ವಿಶಾಲ ಮರದ ರೆಂಬೆ,ಕೊಂಬೆಗಳನ್ನು ಕತ್ತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಕಳೆದ ವಾರ ಕಲ್ಲಡ್ಕ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೆಂದು ಗುರುತಿಸಲಾದ ಖಲೀಲನನ್ನು ಬಿಡುಗಡೆಗೊಳಿಸಿ ಹಲ್ಲೆಗೊಳಗಾದ ಕೇಶವ ನನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಬಗ್ಗೆ ಎಸ್ಪಿಯವರು ಬಾಲಿಶ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು
ವಾರದ ಧರಣಿ: ರತ್ನಾಕರ ಶೆಟ್ಟಿ ಮೇಲಿನ ಗಡೀಪಾರು ರದ್ದತಿಗೆ ಅಗ್ರಹಿಸಿ ಜ.1 ರಿಂದ ಒಂದು ವಾರದ ವರಗೆ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು, ಆದೇರೀತಿ ಪುತ್ತೂರಿನಲ್ಲಿ ಬೃಹತ್ ಪಾದಯಾತ್ರೆ ಮಂಗಳವಾರ ಆಯೋಜಿಸಲಾಗಿದ್ದು,ನ್ಯಾಯ ಸಿಗುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಹಿ.ಜಾ.ವೇ.ಮುಖಂಡರಾದ ಉಲ್ಲಸ್,ಅರುಣ್ ಕುಮಾರ್,ರವಿರಾಜ ಕಡಬ,ಚಂದ್ರಕುಮಾರ್,ವಿಹಿಂಪ ಮುಖಂಡರಾದ ಸರಪಾಡಿ ಅಶೋಕ ಶೆಟ್ಟಿ,ಪ್ರಶಾಂತ ಕೆಂಪುಗುಡ್ಡೆ ರವರು ಉಪಸ್ಥಿತರಿದ್ದರು.