ಮಂಗಳೂರು, ಸೆ 28 (Daijiworld News/MSP): ನಗರದ ಪಾಂಡೇಶ್ವರದಲ್ಲಿ ಮಾಲ್ನಲ್ಲಿ ಯುವಕನಿಗೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಟಿ ನಡೆದು ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಸೌಹಾರ್ದಯುತ ಜಿಲ್ಲೆ. ಎಲ್ಲರೂ ಒಗ್ಗಟ್ಟಿನಲ್ಲಿ ಹೋಗಬೇಕು. ಸಮಾಜ ಶಾಂತಿ ಕದಡಲು ಸಾಮಾಜಿಕ ಜಾಲತಾಣ ಉಪಯೋಗಮಾಡಬಾರದು. ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಸಣ್ಣ ಪುಟ್ಟ ಗಲಭೆ ಆದಾಗ ಅಲ್ಲಿಗೆ ತಿಳಿಗೊಳಿಸಬೇಕು. ನಮ್ಮ ಜಿಲ್ಲೆಯ ಗೌರವ ಉಳಿಸಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜಿಲ್ಲೆ ಬಗ್ಗೆ ಗೌರವ ಬರುವಂತಹ ಕೆಲಸ ಮಾಡುವ ಜವಬ್ದಾರಿ ಈ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ , ಮತ್ತು ಸರ್ವಧರ್ಮದ ಜನರಿಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಸಂಸದರು, ಶಾಸಕರು, ಜನಪ್ರತಿನಿಧಿಗಳು ಒಂದು ಘಟನೆ ಆದಾಗ ಅದನ್ನು ಸಮರ್ಪಕವಾಗಿ ಪರಿಶೀಲಿಸಿ ಅನ್ಯಾಯಗೊಳಪಟ್ಟವರಿಗೆ ನ್ಯಾಯ ನೀಡುವ ಕೆಲಸ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಮಾಡಬೇಕು.
ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಬೇಕು. ಅಧಿಕಾರಿಗಳು ಇಂತಹ ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಮೊನ್ನೆ ನಡೆದ ಗಲಾಟೆ ಸಣ್ಣ ವಿಚಾರಕ್ಕೆ ಆದ ಗಲಾಟೆ. ಇಂತಹ ಘಟನೆ ಆಗಬಾರದು ಇದನ್ನು ನಾನು ಸಮರ್ಥನೆ ಮಾಡುವುದಿಲ್ಲ. ಜನ ಪ್ರತಿನಿಧಿಗಳು ಈ ವಿಚಾರದಲ್ಲಿ ಜನರನ್ನು ಗೊಂದಲಕ್ಕೆ ದಾರಿ ಮಾಡಿಕೊಡಬಾರದು ಈ ನಡುವೆ ಕೆಲ ಸಂಘಟನೆಗಳು ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿವೆ ಎಂದರು.