ಕುಂದಾಪುರ ಜ 1: ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಭಾನುವಾರ ಕೊಲ್ಲೂರಿಗೆ ಆಗಮಿಸಿ ಜ 1ರ ಸೋಮವಾರ ಮೂಕಾಂಬಿಕಾ ದೇವಳದಲ್ಲಿ ವಿಶೇಷ ಪೂಜೆ ಮತ್ತು ಹೋಮ ಹವನಗಳನ್ನ ಸಲ್ಲಿಸಿದರು.
ಮಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ ಅವರು ರಸ್ತೆ ಮಾರ್ಗವಾಗಿ ಭಾನುವಾರ ಕೊಲ್ಲೂರು ತಲುಪಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆಗೆ ಮೂಕಾಂಬಿಕೆಗೆ ವಿಶೇಷ ಪೂಜೆ, ಕುಂಕುಮಾರ್ಚನೆ ನೆರವೇರಿಸಿದರು. ನಂತರ 8 ಗಂಟೆ ಸುಮಾರಿಗೆ ಮೂಕಾಂಬಿಕೆ ಸನ್ನಿಧಿಯಲ್ಲಿ ತುಲಾಭಾರ ಸೇವೆ ಮತ್ತು ಚಂಡಿಕಾ ಹೋಮವನ್ನ ನೇರವೇರಿಸಿದರು. ಈ ಹಿಂದೆ ಕೂಡ ಕೊಲ್ಲೂರಿಗೆ ಭೇಟಿ ನೀಡಿದ್ದ ಅವರು ಚಂಡಿಕಾ ಹೋಮವನ್ನ ನೇರವೇರಿಸಿದ್ದರು ಎನ್ನಲಾಗಿದೆ.
ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ವ್ಯವಸ್ಥಾಪನಾ ಸಮಿತ ಸದಸ್ಯ ಕೆ.ರಮೇಶ್ ಗಾಣಿಗ, ನರಸಿಂಹ ಹಳಗೇರಿ ಮೊದಲಾದವರು ಮುಖ್ಯಮಂತ್ರಿಗಳಿಗೆ ಪೂರ್ಣಕುಂಭ ಸ್ವಾಗತಕೋರಿದರು.
ನಂತರ ರಸ್ತೆ ಮಾರ್ಗವಾಗಿ ಉಡುಪಿ ಮತ್ತು ಶ್ರೀ ಕ್ಷೇತ್ರ ಕಟೀಲು ದೇವಳವನ್ನ ಭೇಟಿ ಮಾಡಿ ಅಲ್ಲಿಂದ ಮಂಗಳೂರಿನಲ್ಲಿ ವಿಮಾನದ ಮೂಲಕ ವಾಪಾಸು ತೆರಳಿದ್ದಾರೆ.