ಕುಂದಾಪುರ, ಸೆ 28 (DaijiworldNews/SM): ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷೆಯ ಆಯುಷ್ಮಾನ್ ಯೋಜನೆಯಲ್ಲಿ ಒಂದಿಷ್ಟು ಗೊಂದಲಗಳಿರುವುದು ನನ್ನ ಗಮನಕ್ಕೆ ಬಂದಿದೆ. 3ಎ ಶಿಫಾರಸ್ಸನ್ನು ತಕ್ಷಣದಿಂದ ರದ್ದು ಮಾಡುವಂತೆ ಆದೇಶ ಮಾಡುತ್ತೇನೆ. ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆ ಭರ್ತಿಗೆ ಆರೋಗ್ಯ ಇಲಾಖೆಯ ಮೂಲಕವೇ ನೇರ ನೇಮಕ ಮಾಡಿಕೊಳ್ಳಲು ಸೂಚನೆ ನೀಡುತ್ತೇನೆ ಎಂದು ರಾಜ್ಯದ ಆರೋಗ್ಯದ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ಇವರ ವತಿಯಿಂದ ಸುಮಾರು 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 150 ಹಾಸಿಗೆಗಳ ಅತ್ಯಾಧುನಿಕ ಸುಸಜ್ಜಿತ ಸೌಲಭ್ಯಗಳನ್ನೊಳಗೊಂಡ ದಿ|ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಿಭಾಗದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಅರ್ಪಣೆ ಮಾಡುವಂತಹ ವಿಶಾಲ ಮನಸ್ಸಿನವರು ಇವತ್ತು ತೀರಾ ಅಪರೂಪ. ಹಾಗಿರುವಾಗ ಜಿ.ಶಂಕರ್ ಅವರು ಆರು ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಸರ್ಕಾರಕ್ಕೆ ನೀಡುತ್ತಿರುವುದು ವಿಶೇಷ. ಸ್ವಾರ್ಥವೇ ತುಂಬಿರುವ ಈ ದಿನಗಳಲ್ಲಿ ಜಿ.ಶಂಕರ್ ಅಂತವರು ಮಾದರಿಯಾಗುತ್ತಾರೆ. ನನ್ನ ಸಮ್ಮುಖದಲ್ಲಿ ಆಸ್ಪತ್ರೆಯ ಸುಸಜ್ಜಿತ ಕಟ್ಟಡವನ್ನು ದಾನವಾಗಿ ಮಾಡುತ್ತಿರುವ ದೃಶ್ಯವನ್ನು ನಾನೆಂದೂ ಮರೆಯಲಾರೆ ಎಂದರು.
ಇಷ್ಟೊಂದು ಸುಸಜ್ಜಿತ ಆಸ್ಪತ್ರೆಯ ಕಟ್ಟಡವನ್ನೇ ನಿರ್ಮಾಣ ಮಾಡಿ ಸರ್ಕಾರಕ್ಕೆ ನೀಡಿರುವಾಗ ಇಲ್ಲಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿ ರಾಜ್ಯಕ್ಕೆ ಮಾದರಿಯಾಗಿ ಮಾಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಇದನ್ನು ತಾಯಿ ಮಕ್ಕಳ ಆಸ್ಪತ್ರೆಯನ್ನಾಗಿ ಮಾಡಬೇಕು ಎನ್ನುವ ಜಿ.ಶಂಕರ್ ಬೇಡಿಕೆಯಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಪೂರ್ಣ ಪ್ರಮಾಣದ ತಾಯಿ ಮಕ್ಕಳ ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದರು.