ಮಂಗಳೂರು, ಸೆ 28 (DaijiworldNews/SM):ವಿದೇಶಿ ಉದ್ಯೋಗದ ಬಗ್ಗೆ ವೀಸಾ ಮಾಡಿಸಿಕೊಡುವ ಅನಧಿಕೃತ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಆರಂಭಿಸಿದ್ದು, ಶನಿವಾರ ನಗರದ ಏಳು ಕೇಂದ್ರಗಳಿಗೆ ದಾಳಿ ನಡೆಸಿದ್ದಾರೆ.ವಿದೇಶಾಂಗ ವ್ಯವಹಾರ ಇಲಾಖೆಯ ಪರವಾನಿಗೆ ಹೊಂದಿರುವ ವೀಸಾ ಏಜನ್ಸಿಗಳು ಮಾತ್ರ ಅಧಿಕೃತ ಕಚೇರಿಗಳಾಗಿದ್ದು, ಈ ಇಲಾಖೆಯ ಪರವಾನಿಗೆ ಇಲ್ಲದವು ಅನಧಿಕೃತ ಕೇಂದ್ರಗಳಾಗಿವೆ.
ಅನಧಿಕೃತ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ವಿದೇಶಾಂಗ ಇಲಾಖೆಯಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಆರಂಭಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.
ಶನಿವಾರ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ವೀಸಾ ಏಜನ್ಸಿಗಳಿಗೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಏಳು ಅನಧಿಕೃತ ವೀಸಾ ಏಜನ್ಸಿಗಳು ಪತ್ತೆಯಾಗಿವೆ. ಅವುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ನಗರದ ವೀಸಾ ಏಜನ್ಸಿ ಮಾಣಿಕ್ಯ ಅಸೋಸಿಯೇಟ್ಸ್ ಮೂಲಕ ಕುವೈತ್ಗೆ ತೆರಳಿದ್ದ ಮಂಗಳೂರಿನ 34 ಮಂದಿ ವೀಸಾದಲ್ಲಿ ನಮೂದಿಸಿದ್ದ ಉದ್ಯೋಗ ಸಿಗದೆ ಅಲ್ಲಿ ಸಂಕಷ್ಟಕ್ಕೆ ಸಿಲುಕಿ ಬಳಿಕ ಸಂಬಳವೂ ಇಲ್ಲದೆ ತೀವ್ರ ಕಷ್ಟ ಪಟ್ಟು ಮರಳಿ ಮಂಗಳೂರಿಗೆ ತಲುಪಿದ್ದರು.
ಈ ಕುವೈತ್ ಸಂತ್ರಸ್ತರ ನಿಯೋಗ ಶುಕ್ರವಾರ ಪೊಲೀಸ್ ಆಯುಕ್ತರನ್ನು ಬೇಟಿ ಮಾಡಿ ತಾವು ಮಾಣಿಕ್ಯ ಅಸೋಸಿಯೇಟ್ಸ್ಗೆ ಪಾವತಿಸಿದ್ದ 75,000 ರೂ.ನ್ನು ಮರಳಿಸಲು ವ್ಯವಸ್ಥೆ ಮಾಡಬೇಕೆಂದು ಮನವಿ ಸಲ್ಲಿಸಿತ್ತು. ಅದರ ಬೆನ್ನಿಗೇ ಶನಿವಾರ ನಗರದ ಅನಧಿಕೃತ ವೀಸಾ ಏಜನ್ಸಿಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.