ಉಡುಪಿ,ಸೆ 29(Daijiworld News/MSP): ಸಚಿವರಿಗೆ ಹೆಚ್ಚುವರಿ ಖಾತೆ ಹಂಚಿಕೆಯಾಗುತ್ತಿದ್ದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಕೋಪ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಸೆ.೨೮ರ ಶನಿವಾರ ಆರೋಗ್ಯ ಸಚಿವ ಶ್ರೀರಾಮುಲು, ಈಶ್ವರಪ್ಪ ಅವರಿಗೆ ಬುದ್ಧಿವಾದ ಹೇಳಿದ್ದಾರೆ.
’ನಾವ್ಯಾರೂ ಮಂತ್ರಿ ಆಗ್ತೇವೆ ಅಂತ ತಿಳ್ಕೊಂಡೇ ಇರಲಿಲ್ಲ. ಹಿರಿಯರ ಆಶೀರ್ವಾದದಿಂದ ನಾವೆಲ್ಲಾ ಮಂತ್ರಿಗಳಾಗಿದ್ದೇವೆ. ಸಿಕ್ಕಿದ್ರಲ್ಲೇ ನಾವು ಸಮಾಧಾನ ಆಗ್ಬೇಕು. ಮನುಷ್ಯನಿಗೆ ಆಸೆಗಳು ಇರೋದು ಸಹಜ. ಇದ್ದಿದ್ರಲ್ಲೇ ಅಡ್ಜಸ್ಟ್ ಮೆಂಟ್ ಮಾಡ್ಕೊಂಡು ಜನರಿಗೆ ಸಹಾಯ ಮಾಡಿ " ಎಂದು ಶ್ರೀರಾಮುಲು ಕಿವಿಮಾತು ಹೇಳಿದ್ದಾರೆ.
ಬಳ್ಳಾರಿ ವಿಭಜನೆ ಕುರಿತಾಗಿ ಸಿಎಂ ಕರೆದ ಸಭೆಗೆ ಹೋಗಲ್ಲ, ಆಮೇಲೆ ಸಿಎಂ ಜೊತೆ ಅಭಿಪ್ರಾಯ ಹೇಳುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ. ಇದೆಲ್ಲಾ ಮುಖ್ಯಮಂತ್ರಿ ಗಳ ವಿವೇಚನೆಗೆ ಬಿಟ್ಟ ವಿಚಾರ. ನಾನಿನ್ನೂ ಶಾಸಕರನ್ನು ಒಟ್ಟುಗೂಡಿಸಿ ಮಾತನಾಡಿಲ್ಲ. ಎಲ್ಲರ ಜೊತೆ ಮಾತಾಡಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಇವತ್ತು ನನ್ನ ವೈಯ್ಯಕ್ತಿಕ ವಿಚಾರ ಹೇಳಲಾರೆ.ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಮಾತನಾಡೋದು ಸರಿಯಲ್ಲ. ಸರ್ಕಾರಕ್ಕೆ ಮುಜುಗರ ಆಗಬಾರದು, ಗೌಪ್ಯವಾಗಿ ಸಿಎಂ ಜೊತೆ ಮಾತನಾಡುವೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿಎಸ್ ಯಡಿಯೂರಪ್ಪ ಅವರ ನಡುವೆ ಮುಸುಕಿನ ಗುದ್ದಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮಲ್ಲಿ ಯಾವುದೇ ಮುಸುಕಿನ ಗುದ್ದಾಟ ಇಲ್ಲ. ಹೊರಗಿನ ಗುದ್ದಾಟವೂ ಇಲ್ಲ. ಕಟೀಲ್ ನೇತೃತ್ವದಲ್ಲಿ ಪಕ್ಷ ಮುಂದುವರಿಯುತ್ತೆ. ಸರ್ಕಾರದ ವಿಷಯಕ್ಕೆ ಬಂದರೆ ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಸ್ಪಷ್ಟನೆ ನೀಡಿದರು. ಉಡುಪಿಯ ಜಿ.ಶಂಕರ್ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದ ಸಚಿವರು, ಅನಾರೋಗ್ಯಪೀಡಿತ ಬಡವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಿಯಮ ಸರಳೀಕರಿಸಲು ಆರೋಗ್ಯ ಸಚಿವ ಶ್ರೀರಾಮುಲು ನಿರ್ಧಾರಿಸಿದ್ದು, ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೆಫರಲ್ ಲೆಟರ್ ಬೇಕಾಗಿಲ್ಲ. ರೋಗಿಗಳು ಖಾಸಗಿ ಆಸ್ಪತ್ರೆಗೆ ನೇರ ದಾಖಲಾಗಬಹುದು. ಆಯುಷ್ಮಾನ್ ಭಾರತ್ ಅರೋಗ್ಯಕಾರ್ಡ್ ನ 3ಎ ಗೆ ಸಂಬಂಧಿಸಿದ ರೆಫರಲ್ ಲೆಟರ್ ಇನ್ಮಂದೆ ಬೇಕಾಗಿಲ್ಲ. ತಕ್ಷಣವೇ ಈ ನಿಯಮ ರದ್ದತಿಗೆ ಆರೋಗ್ಯ ಸಚಿವರ ನಿರ್ಧಾರ ಮಾಡಬೇಕು. ಇನ್ನೆರಡು ದಿನಗಳಲ್ಲಿ ನಿಯಮ ಜಾರಿ ಮಾಡಲಾಗುವುದು ಎಂದರು.
ಡಿಕೆಶಿಗೆ ಇಡಿ ಪ್ರಕರಣ:
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಸಂಗ್ರಹ ಪ್ರಕರಣ ಕೋರ್ಟಿನಲ್ಲಿ ಇದೆ. ಹೀಗಾಗಿ ಜಾರಿ ನಿರ್ದೇಶನಾಲಯ ಮಾಜಿ ಸಚಿವರಿಗೆ ಕಿರುಕುಳ ನೀಡುತ್ತಿರುವ ಆರೋಪ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಪ್ರಕರಣ ಕೋರ್ಟ್ ನಲ್ಲಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಡಿಕೆ ಶಿವಕುಮಾರ್ ತೊಂದರೆಯಲ್ಲಿರುವ ಸಮಯದಲ್ಲಿ ಮಾತನಾಡಲು ಇಷ್ಟ ಇಲ್ಲ. ನಿಯಮದಂತೆ ಕಾನೂನು ಪ್ರಕ್ರಿಯೆ ಮುಂದುವರಿಯಲಿ ಎಂದು ತಿಳಿಸಿದರು.