ಮಂಗಳೂರು,ಸೆ.೦೨: ರಾಜ್ಯದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣದಲ್ಲಿ ಪಿ ಎಫ್ ಐ, ಎಸ್ ಡಿ ಪಿ ಐ ಹಾಗೂ ಕೆ ಎಫ್ ಡಿ ಸಂಘಟನೆಗಳು ನೇರವಾಗಿ ಭಾಗಿಯಾಗಿದ್ದು ಇಂತಹ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಹಾಗೂ ಈ ಪ್ರಕರಣಗಳನ್ನು ಸಿಬಿಐ ಗೆ ಹಸ್ತಾಂತರಿಸುವಂತೆ ಆಗ್ರಹಿಸಿ ಜೊತೆಗೆ ಇಂತಹ ಸಮಾಜಘಾತುಕ ಸಂಗಟನೆಗಳಿಗೆ ಮತ್ತು ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ ರೈಯನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ ೪ ರಂದು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಭಟನಾ ಸಭೆ ಹಾಗೂ ಸೆಪ್ಟೆಂಬರ್ ೭ರಂದು ಮಂಗಳೂರು ಚಲೋ ಪ್ರತಿಭಟನಾ ಬೈಕ್ ರ್ಯಾಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಹಿಟ್ಲರ್ ನಂತೆ ವರ್ತಿಸಿ ನಾಝೀ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ ಎಂದವರು ಹೇಳಿದರು. ಕೇಂದ್ರ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದ್ದು ಇದರಲ್ಲಿ ಬಿ.ಎಸ್ ಯಡಿಯೂರಪ್ಪ, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.