ಬಂಟ್ವಾಳ, ಸೆ.29(Daijiworld News/SS): ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಸೇತುವೆಯಲ್ಲಿ ಶನಿವಾರ ತಡರಾತ್ರಿ ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿದ ಘಟನೆ ವರದಿಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕೊಣಾಜೆ ಠಾಣೆ ವ್ಯಾಪ್ತಿಯ ಇನೋಳಿ ಕೊರಿಯ ಎಂಬಲ್ಲಿಯ ನೇತ್ರಾವತಿ ನದಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಕಲ್ಪಿತಾ ಮಂದಣ್ಣ ಎಂದು ಗುರುತಿಸಲಾಗಿದೆ.
ಸೆ.28ರ ರಾತ್ರಿ ಬಿ.ಸಿ.ರೋಡ್ ನೇತ್ರಾವತಿ ನದಿಗೆ ತಾಯಿ ಮತ್ತು ಇಬ್ಬರು ಮಕ್ಕಳು ಹಾರಿ ಆತ್ಮಹತ್ಯೆಗೈದಿದ್ದರು. ಇದರಲ್ಲಿ ತಾಯಿ ಕವಿತಾ ಮಂದಣ್ಣ ಅವರನ್ನು ಬದುಕಿಸಲು ಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಇದೀಗ ಕವಿತಾ ಮಂದಣ್ಣ ಅವರ ಮಗಳು ಕಲ್ಪಿತಾ ಮಂದಣ್ಣ ಮೃತದೇಹ ಪತ್ತೆಯಾಗಿದೆ. ಆದರೆ ಕೌಶಿಕ್ ಮಂದಣ್ಣ ಅವರ ಸುಳಿವು ಸಿಕ್ಕಿಲ್ಲ. ಅವರಿಗಾಗಿ ನದಿಯಲ್ಲಿ ಹುಡುಕಾಟ ನಡೆದಿದೆ.
ಕವಿತಾ ಮಂದಣ್ಣ ಅವರ ಪತಿ ಕಿಶನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನ ನೋವಿನಿಂದ ಈ ಕುಟುಂಬ ಮಂಗಳೂರು ಕಡೆಗೆ ಆಗಮಿಸಿ ಪತ್ರ ಬರೆದಿಟ್ಟು ನೇತ್ರಾವತಿ ನದಿಗೆ ಹಾರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಕೆಎ 08 ಎಂಎ 0489 ನೋಂದಣಿಯ ಕಾರಿನಲ್ಲಿ ಬಂದಿದ್ದ ಮೂವರು ಪಾಣೆಮಂಗಳೂರಿನ ನೇತ್ರಾವತಿ ನದಿಯ ಸೇತುವೆ ಬಳಿ ವಾಹನ ನಿಲ್ಲಿಸಿ ನದಿಗೆ ಹಾರಿದ್ದರು. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.