ಕಾಸರಗೋಡು, ಸೆ 29(Daijiworld News/MSP): ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಗೆ ಮತ್ತೆ ಸಾಕ್ಷಿಯಾಗುತ್ತಿದೆ. ಹಲವು ಗೊಂದಲದ ಬಳಿಕ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದೆ. ನಾಮಪತ್ರ ಸಲ್ಲಿಸಲು ನಾಳೆ ಕೊನೆ ದಿನವಾಗಿದೆ.
ಬಿಜೆಪಿಯಿಂದ ರವೀಶ ತಂತ್ರಿ ಕುಂಟಾರು ರವರನ್ನು ಮತ್ತೆ ಕಣಕ್ಕಿಳಿಸಲಾಗಿದೆ. ಯು ಡಿ ಎಫ್ ನಿಂದ ಎಂ . ಸಿ ಖಮರುದ್ದೀನ್ , ಎಲ್ ಡಿ ಎಫ್ ನಿಂದ ಎಂ . ಶಂಕರ ರೈ ಅಭ್ಯರ್ಥಿಯಾಗಿದ್ದಾರೆ. ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವರದಿಂದ ಈ ಬಾರೀ ಎಲ್ ಡಿ ಎಫ್ ಮತ್ತು ಬಿಜೆಪಿ ಕನ್ನಡಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ಸದಸ್ಯ ಕೆ .ಶ್ರೀಕಾಂತ್ , ಕೆ .ಸತೀಶ್ಚಂದ್ರ ಭಂಡಾರಿ ರವರ ಹೆಸರು ಕೊನೆತನಕ ಕೇಳಿ ಬಂದಿದ್ದರೂ ರವೀಶ ತಂತ್ರಿ ಯವರಿಗೆ ಟಿಕೆಟ್ ನೀಡಲಾಗಿದೆ.
2016 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ .ಸುರೇಂದ್ರನ್ ಕೇವಲ 89 ಮತಗಳ ಅಂತರದಿಂದ ಸೋಲು ಕಂಡಿದ್ದರು. ರವೀಶ ತಂತ್ರಿ 2016 ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು. ಕಳೆದ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದ ರವೀಶ ತಂತ್ರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದಿದ್ದ ಬಿಜೆಪಿ 11 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಹಿನ್ನಡೆ ಸಾಧಿಸಿತ್ತು . 2016 ರಲ್ಲಿ ಕಣಕ್ಕಿಳಿದಿದ್ದ ಕೆ . ಸುರೇಂದ್ರನ್ ಈ ಬಾರೀ ಸ್ಪರ್ಧಿಸಲು ನಿರಾಕರಿಸಿದ್ದು , ಇದರಿಂದ ಎರಡನೇ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಸವಾಲಾಗಿ ಪರಿಣಮಿಸಿತ್ತು.