ಗಂಗೊಳ್ಳಿ ಜ 2 : ತ್ರಾಸಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರ ಸಮೀಪದಲ್ಲಿರುವ ಮೊವಾಡಿ ಗೇರು ಪ್ಲಾಂಟೇಶನ್ ಸಮೀಪ ಸೋಮವಾರ ಅಗ್ನಿ ಅವಘಡ ಸಂಭವಿಸಿದ್ದು, ನೂರಾರು ಗೇರು ಗಿಡ ಮರಗಳಿಗೆ ಹಾನಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಸಮೀಪ ಗಂಗೊಳ್ಳಿ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಗೇರು ಪ್ಲಾಂಟೇಶನ್ ಸಮೀಪ ಅಕಸ್ಮಾತಾಗಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಲೇ ಬೆಂಕಿ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸತೊಡಗಿತು. ಬಲವಾದ ಗಾಳಿ ಬೀಸುತ್ತಿರುವುದರಿಂದ ಬೆಂಕಿ ಸಮೀಪದ ಪ್ರದೇಶಗಳಿಗೆ ಹಬ್ಬಿತು. ಸುತ್ತಲೂ ಬೆಳೆದು ನಿಂತಿರುವ ಒಣಗಿದ ಸಣ್ಣ ಸಣ್ಣ ಗಿಡಗಳು ಹಾಗೂ ಹುಲ್ಲುಗಳಿಗೆ ಬೆಂಕಿ ತಗುಲಿ ಬೆಂಕಿ ಹೆಚ್ಚಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಗಂಗೊಳ್ಳಿ ೨೪x೭ ಕಾರ್ಯಕರ್ತರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರು. ಇದೇ ಸಂದರ್ಭ ಘಟನಾ ಸ್ಥಳಕ್ಕೆ ಬಂದ ಕುಂದಾಪುರ ಅಗ್ನಿಶಾಮಕ ದಳದವರು ಸುಮಾರು ಒಂದು ಗಂಟೆ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಗೇರು ಪ್ಲಾಂಟೇಶನ್ನಲ್ಲಿರುವ ಗೇರು ಗಿಡಗಳು ಬೆಂಕಿಯ ಕೆನ್ನಾಲಿಗೆ ಸಿಲುಕಿ ಸುಟ್ಟು ಹೋಗಿದೆ ಅಲ್ಲದೆ ಸಮೀಪದ ಖಾಸಗಿ ಸ್ಥಳದಲ್ಲಿರುವ ಮರಗಿಡಗಳಿಗೂ ಹಾನಿಯಾಗಿದೆ. ಬೆಂಕಿ ಆಕಸ್ಮಿಕಕ್ಕೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಗೇರು ಪ್ಲಾಂಟೇಶನ್ ಮಧ್ಯದಲ್ಲಿರುವ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಕಿಡಿ ಬೆಂಕಿ ಆಕಸ್ಮಿಕಕ್ಕೆ ಕಾರಣವಾಗಿರಬಹುದು ಅಥವಾ ಯಾರೋ ಕಿಡಿಗೇಡಿಗಳು ಒಣಗಿದ ಹಲ್ಲುಗಳಿಗೆ ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್, ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ ಪೂಜಾರಿ, ತ್ರಾಸಿ ಗ್ರಾಪಂ ಪ್ರಭಾರ ಪಿಡಿಒ ದಿನೇಶ ಶೇರುಗಾರ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.