ಬೆಳ್ತಂಗಡಿ, ಸೆ 30 (Daijiworld News/MSP): ಇಲ್ಲಿನ ಬೆಳ್ತಂಗಡಿ ಅರಣ್ಯ ಇಲಾಖೆ ಗೋದಾಮಿಗೆ ಶನಿವಾರ ತಡ ರಾತ್ರಿ ಕನ್ನ ಹಾಕಿರುವ ಖದೀಮರು ಗೋದಾಮಿನ ಹಿಂಭಾಗದ ಗೋಡೆ ಕೊರೆದು ಒಳನುಗ್ಗಿದ್ದಾರೆ.
ಕಳ್ಳತನಕ್ಕೆ ವಿಫಲ ಪ್ರಯತ್ನ ನಡೆದಿದ್ದು, ಗೋದಾಮಿನ ಶಟರ್ ತೆರೆಯುವಾಗ ರಾತ್ರಿ ಕಾವಲು ಕಾಯುತ್ತಿದ್ದ ಅರಣ್ಯ ರಕ್ಷಕ ಎಚ್ಚರಗೊಂಡಾಗ ಕಳ್ಳರು ಓಡಿಹೋಗಿದ್ದಾರೆ.
ರಾತ್ರಿ 11.50ಕ್ಕೆ ಗೋದಾಮಿನ ಹಿಂಬದಿ ಮನೆಯ ಕಾಂಪೌಂಡ್ ಹಾರಿ ಒಳ ನುಗ್ಗಿದ ಕಳ್ಳರು 2.30 ರವೆರೆಗೆ ಗೋಡೆ ಕೊರೆದು ಒಳ ನುಗ್ಗಿದ್ದಾರೆ. ಕೊರೆದ ಕೋಣೆಯಲ್ಲಿ ಹಾಲಮಡ್ಡಿ (ದೂಪದ ಮೇಣ) ಮಾತ್ರ ಸಿಕ್ಕಿದ್ದು ಅದನ್ನು ಅಲ್ಲೆ ಬಿಟ್ಟು ಮುಂಭಾಗದಿಂದ ಮತ್ತೊಂದು ಕೋಣೆಯ ಶಟರ್ ತೆರೆಯಲು ಮುಂದಾಗಿದ್ದಾರೆ. ಈ ವೇಳೆ ಶಬ್ದ ಬಂದು ಕಾವಲುಗಾರ ಎಚ್ಚರಗೊಂಡಿದ್ದರಿಂದ ಪರಾರಿಯಾಗಿದ್ದಾರೆ.
ಮೇಲ್ನೋಟಕ್ಕೆ ಇಬ್ಬರು ಒಳ ನುಸುಳಿರುವುದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಮುಸುಕುಧಾರಿಗಳಿಬ್ಬರು ಸಿಸಿ ಕ್ಯಾಮರಾ ದಿಕ್ಕು ಬದಲಾಯಿಸಿರುವುದು ಮತ್ತೊಂದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ.
ಕಳೆದ ಜುಲೈ 13ರಂದು ಇದೇ ಗೋದಾಮಿನ ಬೀಗ ಮುರಿದು ಕಳ್ಳರು ನುಸುಳಿ 344 ಕೆ.ಜಿ.ಗಂಧ ಎಗರಿಸಿದ್ದರು. ಈ ವೇಳೆ ಸುಮಾರು 54 ಕೆ.ಜಿ.ಯಷ್ಟು ಉಳಿದಿತ್ತು. ಇದರ ಸುಳಿವು ಸಿಕ್ಕಿ ಮತ್ತೆ ಕಳ್ಳತನಕ್ಕೆ ಯತ್ನಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಕೃತ್ಯನಡೆದ ಬಳಿಕ ಗೋದಾಮಿನ ಸುತ್ತ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.ಮತ್ತೊಂದೆಡೆ ಕಳೆದ ಸೆ.18ಕ್ಕೆ ಬೆಳ್ತಂಗಡಿ ಉಜಿರೆ ಸಮೀಪದ ದೂಜಿರಿಗೆ ಎಂಬಲ್ಲಿ 10 ಆನೆ ದಂತ ಶೇಖರಿಸಿಟ್ಟ ಖದೀಮರನ್ನ ವಿಷೇಶ ಪೊಲೀಸ್ ಸಂಚಾರಿ ಅರಣ್ಯದಳ ಮಂಗಳೂರು ತಂಡ ಹೆಡೆ ಮುರಿ ಕಟ್ಟಿದ್ದರು.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿ ಕಲೈಮಾರ್, ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.