ಉಡುಪಿ, ಸೆ 30 (Daijiworld News/MSP):’ತಂತಿಯ ಮೇಲೆ ನಡೆದರೆ ಬಿದ್ದು ಹೋಗ್ತೀರ. ಹೀಗೆ ಅಧಿಕಾರ ಚಲಾಯಿಸಲು ಸುಮ್ಮನೆ ರಾಜೀನಾಮೆ ಕೊಟ್ಟು ನಡೆಯಿರಿ ’ ಎಂದು ಸಿಎಂ ಯಡಿಯೂರಪ್ಪ ಅವರ ಹೇಳಿಕೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳನ್ನು ರಾಜೀನಾಮೆ ಕೊಡಲಿ ಎನ್ನುವ ಸಿದ್ದರಾಮಯ್ಯನವರೇ, " ನಿಮ್ಮ ಕಿರುಕುಳವನ್ನು ತಾಳಲಾರದೆ ವಿಷ ಕುಡಿದು ಸರ್ಕಾರ ನಡೆಸುತ್ತಿದ್ದೇನೆ ಎಂದಿದ್ದ ಕುಮಾರಣ್ಣನಿಗೆ ರಾಜೀನಾಮೆ ನೀಡಲು ನೀವ್ಯಾಕೆ ಹೇಳಿರಲಿಲ್ಲ? ಯಾಕೆ ಓಹೋ... ಅವಾಗಾ ಮೇಡಂ ಬೈತಾರೆ ಎನ್ನುವ ಭಯವಿತ್ತೇ..? ಎಂದು ಕಿಚಾಯಿಸಿದ್ದಾರೆ. ಮಾತ್ರವಲ್ಲ ಸಿಎಂ ಯಡಿಯೂರಪ್ಪ ಜೊತೆ ನಾವಿದ್ದೇವೆ ಎಂದಿದ್ದಾರೆ.
ಹಾಲಿ ಕರ್ನಾಟಕ ಸರ್ಕಾರದ ಸಂಕಷ್ಟದ ಕುರಿತು ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ’ನಾನು ಕತ್ತಿ ಮೇಲೆ ನಡೆಯುತ್ತಿದ್ದೇನೆ ’ ಎಂದು ಮಾರ್ಮಿಕವಾಗಿ ಹೇಳಿದ್ದರು. ಇದಕ್ಕೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, "ಯಡಿಯೂರಪ್ಪನವರನ್ನು ಕಂಡರೆ ನನಗೆ ಅಯ್ಯೋ ಅನಿಸುತ್ತದೆ. ಅವರ ಪಕ್ಷದೊಳಗೆ ಯಡಿಯೂರಪ್ಪನವರ ರೆಕ್ಕೆ ಪುಕ್ಕವನ್ನೆಲ್ಲ ಕತ್ತರಿಸಲಾಗುತ್ತಿದೆ. ನೆರೆ ಪರಿಹಾರವನ್ನೂ ಕೇಳುವ ಧೈರ್ಯ ಅವರಿಗಿಲ್ಲ. ಸುಮ್ಮನೆ ಹೀಗೆ ತಂತಿ ಮೇಲೆ ಯಾಕೆ ನಡೆಯುತ್ತೀರಿ. ಹೀಗೆ ತಂತಿ ಮೇಲೆ ನಡೆದು ಕೆಳಗೆ ಬೀಳುವ ಬದಲು ರಾಜೀನಾಮೆ ಕೊಟ್ಟು ನಡೆಯಿರಿ” ಎಂದು ಗೇಲಿ ಮಾಡಿದ್ದಾರೆ.