ಗಂಗೊಳ್ಳಿ ಜ 2: ಇಲ್ಲಿನ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊವಾಡಿ ಎಂಬಲ್ಲಿ ಹೊಸವರ್ಷದಂದೇ ಅಂದರೆ ಜ ೧ ರ ಭಾನುವಾರ ರಾತ್ರಿ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾಗಿದೆ. ಮೊವಾಡಿ ಗ್ರಾಮದ ರಾಘವೇಂದ್ರ ಗಾಣಿಗ ಎಂಬುವರ ಮನೆಗೆ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿದ್ದು, ಬೆಂಕಿ ಇಡೀ ಮನೆಯನ್ನು ಆವರಿಸಿಕೊಂಡಿತ್ತು. ಮನೆಯ ಒಳಗಿದ್ದ ಚಿನ್ನಾಭರಣ, ನಗದು, ಬಟ್ಟೆ ಬರೆಗಳು, ಕಾಗದ ಪತ್ರಗಳು, ಟಿ.ವಿ., ಹೋಮ್ ಥಿಯೇಟರ್, ಪಿಠೋಪಟಕರಣಗಳು ಸೇರಿದಂತೆ ಎಲ್ಲಾ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಹೋಗಿದೆ. ಮನೆಯಲ್ಲಿ ಸುಮಾರು 24 ಪವನ್ ಚಿನ್ನಾಭರಣ ಹಾಗೂ ಸುಮಾರು 1.5 ಲಕ್ಷ ರೂ. ನಗದು ಇದೆ ಎನ್ನಲಾಗಿದ್ದು ಎಲ್ಲವೂ ಸುಟ್ಟು ಕರಕಲಾಗಿದೆ. ಮನೆಯ ಮೇಲ್ಛಾವಣಿ ಸೇರಿದಂತೆ ಮರದ ಮುಚ್ಚಿಗೆ, ಮನೆಯ ಗೋಡೆಗಳು ಸಂಪೂರ್ಣ ಹಾನಿಗೊಳಗಾಗಿದೆ.
ಮನೆಯಲ್ಲಿ ರಾಘವೇಂದ್ರ ದೇವಾಡಿಗ ಒಬ್ಬರೇ ಇದ್ದು ಇವರು ಹೊಸಾಡು ಪ್ರದೇಶದಲ್ಲಿ ನಡೆಯುತ್ತಿದ್ದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸಂಭ್ರಮಿಸುತ್ತಿದ್ದರು. ಮನೆಗೆ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ದೌಡಾಯಿಸಿದ ಅವರು ಸ್ಥಳೀಯ ಯುವಕರ ನೆರವಿನಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಗ್ನಿಶಾಮಕ ದಳದವರು ಬಂದರೂ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಬೆಂಕಿ ಇನ್ನಷ್ಟು ಹೆಚ್ಚಾಗಿದ್ದರೆ ಸುತ್ತಮುತ್ತಲಿನ ಮನೆಗಳಿಗೆ ಹಬ್ಬುವ ಸಾಧ್ಯತೆಗಳಿತ್ತು. ಸಕಾಲಕ್ಕೆ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾಗಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಮನೆಯವರೆಲ್ಲರೂ ಬೆಂಗಳೂರಿಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸುಮಾರು 10 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ನಾರಾಯಣ ಕೆ. ಗುಜ್ಜಾಡಿ, ರಾಜು ದೇವಾಡಿಗ ತ್ರಾಸಿ, ತ್ರಾಸಿ ಗ್ರಾಪಂ ಅಧ್ಯಕ್ಷ ವೆಂಕಟ ಪೂಜಾರಿ, ಕುಂದಾಪುರ ತಹಶೀಲ್ದಾರ್ ಜಿ.ಎಂ.ಬೋರ್ಕರ್, ಗ್ರಾಮಕರಣಿಕ ಚೌಡಪ್ಪ ಮೊದಲಾದವರು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ.