ಉಡುಪಿ, ಸೆ 30 (Daijiworld News/MSP): ಇಲ್ಲಿನ ಕೃಷ್ಣಾಮಠದಲ್ಲಿ ಕಳೆದ 25 ವರ್ಷದಿಂದ ವಾಸವಿದ್ದ ಆನೆ ಸುಭದ್ರೆಯನ್ನು ಸೋಮವಾರ ಮುಂಜಾನೆ 3-30 ರ ವೇಳೆಗೆ ಏಕಾಏಕಿ ಹೊನ್ನಾಳಿಗೆ ರವಾನೆ ಮಾಡಲಾಗಿದ್ದು ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಮಠಕ್ಕೆ ಆನೆಯನ್ನು ಏಕಾಏಕಿ ರವಾನಿಸಲಾಗಿದ್ದು, ಇದರಿಂದ ಮಠದ ಆಡಳಿತ ಮಂಡಳಿಯ ನಡೆಯನ್ನು ಕಂಡು ಜನರು ಮಾತಾಡಿಕೊಳ್ಳುವಂತಾಗಿದೆ. ಆದರೆ ಕೃಷ್ಣಾಮಠದ ಸಿಬ್ಬಂದಿ ಮಾತ್ರ, ಆನೆಯ ಅನಾರೋಗ್ಯದ ಕಾರಣಕ್ಕೆ ಸ್ಥಳಾಂತರ ಮಾಡುವುದು ಅನಿವಾರ್ಯ. ಹೊನ್ನಾಳಿ ಮಠದಲ್ಲಿರುವ ಗಂಡಾನೆಯ ಮೂಲಕ ಸುಭದ್ರೆಯ ಸಂತಾನೋತ್ಪತ್ತಿ ಯ ಸಲುವಾಗಿ ಕರೆದೊಯ್ಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಭಕ್ತರಿಗೆ ಮಠದ ಈ ನಡವಳಿಕೆ ಹಾಗೂ ಉತ್ತರ ಯಾಕೋ ತೃಪ್ತಿ ತಂದಿಲ್ಲ. ಆದ್ರೆ ಮಾವುತನ ಪ್ರಕಾರ ಸುಭದ್ರೆ ಆರೋಗ್ಯವಾಗಿದೆ ಮತ್ತು ಆನೆಗಳ ಸಂತಾನೋತ್ಪತ್ತಿ ಕಾಲ ಇದಲ್ಲವಾದ ಕಾರಣ ಸ್ಥಳಾಂತರದ ಅಗತ್ಯ ವಿಲ್ಲ ಎನ್ನುತ್ತಾರೆ.
ಕಳೆದ ಇಪ್ಪತ್ತೈದು ವರ್ಷಗಳಿಂದೀಚೆಗೆ ಮಠದ ಪ್ರತಿ ಧಾರ್ಮಿಕ ಕಾರ್ಯಕ್ರಮ , ಉತ್ಸವಗಳು ಮತ್ತು ಹಬ್ಬ ಹರಿದಿನಗಳಿಗೆ ಸುಭದ್ರೆ ಸಾಕ್ಷಿಯಾಗಿದ್ದಾಳೆ. ಹೀಗಾಗಿ ಕೃಷ್ಣಮಠದ ಭಕ್ತರಿಗೂ ಸುಭದ್ರೆಗೂ ಒಂದು ರೀತಿ ಅವಿನಾಭಾವ ಸಂಬಂಧ ಬೆಳೆದಿದೆ. ಆದರೆ ಕಳೆದ ಕೆಲವರ್ಷಗಳಿಂದ ಸುಭದ್ರೆ ಪದೇಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಸಮಸ್ಯೆಯಿಂದಲೂ ಸುಭದ್ರೆ ಬಳಲುತ್ತಿದ್ದಳು. ಹೀಗಾಗಿ ಆಕೆಗೆ ಸುಭದ್ರೆಗೆ ಸಕ್ರೆಬೈಲು ಕ್ಯಾಂಪ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಣಮುಖವಾದ ಬಳಿಕ ಮತ್ತೆ ಕರೆತರಲಾಗಿತ್ತು
ದಿಢೀರೆಂದು ಮುಂಜಾನೆ ಹೊತ್ತಿಗೆ ಸುಭದ್ರೆಯನ್ನು ದೂರ ಸಾಗಿಸಿದ ಬಗ್ಗೆ ಆಕೆಯನ್ನು ಮಠದಿಂದ ದೂರ ಮಾಡಲಾಗುತ್ತಿದೆಯೇ ಎಂದು ಭಕ್ತರು ಅನುಮಾನದಿಂದ ಮಾತಾಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಆನೆ ಸಾಗಾಟದ ವೇಳೆ ಅನೇಕ ಅಡೆತಡೆಗಳು ಉಂಟಾಗಿವೆ. ಹೊನ್ನಾಳಿಗೆ ರವಾನಿಸುವ ಮೊದಲು, ಮಠದ ಹೊರವಲಯದಲ್ಲಿರುವ ಕನಕಾ ಮಾಲ್ ನ ಅರ್ಧಕ್ಕೆ ಕೈ ಬಿಟ್ಟ ಕಟ್ಟಡದ ಮೂಲಕ ಆನೆಯನ್ನು ಲಾರಿಗೆ ಹತ್ತಿಸುವ ಪ್ರಯತ್ನ ನಡೆಯಿತು. ಆದರೆ ನುರಿತ ನಾಲ್ವರು ಮಾವುತರ ಪ್ರಯತ್ನದ ಹೊರತಾಗಿಯೂ ಆನೆ ಲಾರಿ ಹತ್ತಲು ಒಪ್ಪಲೇ ಇಲ್ಲ. ಮಾತ್ರವಲ್ಲದೇ , ಲಾರಿಯ ಚಕ್ರಗಳು ಹೂತುಹೋಗಿ ಸಮಸ್ಯೆ ಉಂಟಾಯ್ತು. ಕೊನೆಗೂ ಹರಸಾಹಸಪಟ್ಟು ಬೆಳಗಿನ ಜಾವ ಮೂರುವರೆ ಗಂಟೆಗೆ ಲಾರಿ ಹತ್ತಿಸಲಾಯ್ತು.
ಇನ್ನು ಆನೆ ಸಾಗಾಟದ ವೇಳೆ ಸೂಕ್ತ ವೈದ್ಯರಾಗಲೀ, ಅರಣ್ಯ ಇಲಾಖೆಯವರಾಗಲೀ ಸ್ಥಳದಲ್ಲಿ ಇರಲಿಲ್ಲ. ಆನೆಯನ್ನು ಮಠಕ್ಕೆ ದಾನ ನೀಡಿದ ಮುಂಬೈನ ಉದ್ಯಮಿಗೆ ಈ ಆನೆಯನ್ನು ಮಠದಿಂದ ಸಾಗಿಸುವುದು ಇಷ್ಟವಿಲ್ಲ ಎಂದು ತಿಳಿದುಬಂದಿದೆ. ಆನೆಯನ್ನು ಕ್ರಮಬದ್ದವಾಗಿ ಸಾಗಾಟ ಮಾಡಿಲ್ಲ ಎಂಬ ಆಕ್ಷೇಪವೂ ಇದೆ. ರಾತೋರಾತ್ರಿ ಗೌಪ್ಯವಾಗಿ ಸಾಗಿಸಿರುವುದು ಸಂಶಯಾಸ್ಪದವಾಗಿದೆ.
ಇನ್ನು ಈ ವಿಚಾರವಾಗಿ ದೈಜಿವಲ್ಡ್ ವಾಹಿನಿಯೊಂದಿಗೆ ಮಾತನಾಡಿದ ಕೃಷ್ಣಾಮಠದ ಆಡಳಿತಾಧಿಕಾರಿ ಪ್ರಹ್ಲಾದ ಜೋಷಿವರು "ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಆದೇಶದ ಪ್ರಕಾರ ಹಸ್ತಾಂತರ ಮಾಡಿದ್ದೇವೆ. ಆನೆಯ ಮಾಲೀಕತ್ವ ಕೃಷ್ಣ ಮಠದೊಂದಿಗೆಯೇ ಇದೆ. ಆನೆಯ ಹಿತ ದೃಷ್ಟಿಯಿಂದ ಹಸ್ತಾಂತರ ಮಾಡಿದ್ದೇವೆ. ಇಲ್ಲಿರುವುದು ಒಂಟಿ ಹೆಣ್ಣಾನೆ. ಆನೆಯೊಂದು 26 ವರ್ಷದಲ್ಲಿ ಕನಿಷ್ಟ 2 ಬಾರಿ ಗರ್ಭಧಾರಣೆ ಮಾಡಬೇಕು. ಆದರೆ ಸುಭದ್ರೆ ಉಡುಪಿಗೆ ಬಂದು 23 ವರ್ಷವಾದರೂ ಕೂಡಾ ಒಮ್ಮೆಯೂ ಗರ್ಭ ಧರಿಸಿಲ್ಲ. ದಾವಣಗೆರೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾವಣಗೆರೆಯ ಹೊನ್ನಳ್ಳಿ ಸೂಕ್ತ ಜಾಗವೆಂದು ವರದಿ ನಿಡಿದ ಪ್ರಕಾರ ಬೆಂಗಳೂರು ಅರಣ್ಯ ಭವನದ ಅನುಮತಿ ಪಡೆದು ಹಿರೇಕಲ್ಲ್ ಮಠಕ್ಕೆ ಸುಭದ್ರೆಯನ್ನು ಸ್ಥಳಾಂತರ ಮಾಡಿದ್ದೇವೆ. ಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಸುಭದ್ರೆ ನಮ್ಮೊಂದಿಗೆ ಇರಲಿದ್ದಾಳೆ" ಎಂದು ಸ್ಪಷ್ಟನೆ ನೀಡಿದ್ದಾರೆ.