ಉಡುಪಿ, ಸೆ 30 (DaijiworldNews/SM): ಕುಂದಾಪುರ ಫ್ಲೈ ಓವರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲು ನವಯುಗ ಕಂಪೆನಿಗೆ ಡಿಸೆಂಬರ್ ತನಕ ಡೆಡ್ ಲೈನ್ ನೀಡಲಾಗಿದೆ, ಅದಕ್ಕೆ ತಪ್ಪಿದ್ದಲ್ಲಿ ಕಂಪೆನಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಬಿಜೆಪಿ ಸರಕಾರ ಬರುವ ಮೊದಲು ನವಯುಗ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ತಮ್ಮಲ್ಲಿ ಹಣವಿಲ್ಲ ಎಂದು ಕಾಮಗಾರಿ ಮಾಡದೆ ನಿಲ್ಲಿಸಿತ್ತು. ಬಳಿಕ ಸಚಿವ ನಿತಿನ್ ಗಡ್ಕರಿಯವರು ಸಭೆ ನಡೆಸಿ ಹಣಕಾಸು ಸಹಕಾರ ಮಾಡಿದ್ದರು.
ಆದರೆ, ಮತ್ತೆ ಕಂಪೆನಿ ತಾನು ವಹಿಸಿಕೊಂಡಿರುವ ಕೆಲಸ ನಿಲ್ಲಿಸಿದೆ. ಇತ್ತೀಚೆಗೆ ಸಚಿವರು ಅವರೊಂದಿಗೆ ಸಭೆ ನಡೆಸಿದ್ದು ಮಳೆಗಾಲದ ಬಳಿಕ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾವು ಡಿಸೆಂಬರ್ ತನಕ ಕಾಯುತ್ತೇವೆ. ಒಂದೊಮ್ಮೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ, ಬಳಿಕ ಅವರ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಅದನ್ನು ಕೈಗೊಳ್ಳಲಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದ್ದಾರೆ.