ಬಂಟ್ವಾಳ, ಅ 1 (Daijiworld News/RD): ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಸೇತುವೆಯಲ್ಲಿ ಶನಿವಾರ ತಡರಾತ್ರಿ ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿದ್ದು, ಈ ಪೈಕಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕೌಶಿಕ್ ಮಂದಣ್ಣ ಎಂಬ ಯುವಕನ ಮೃತದೇಹ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮ ಸಮೀಪದ ತಾಳಿಪಡ್ಪು ಎಂಬಲ್ಲಿ ಅ.1ರ ಮಂಗಳವಾರ ಪತ್ತೆಯಾಗಿದೆ.
ತಾಳಿಪಡ್ಪು ನದಿ ತೀರದಲ್ಲಿ ಮೃತದೇಹವನ್ನು ತೇಲುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳ ತಂಡ, ಎನ್ಡಿಆರ್ಎಫ್ನ ತಂಡ, ಸ್ಥಳೀಯ ಈಜುಗಾರರ ತಂಡ ಮೃತದೇಹವನ್ನು ಮೇಲೆತ್ತಿ ಮುಂದಿನ ಕಾರ್ಯಕ್ಕಾಗಿ ಮಂಗಳೂರಿಗೆ ರವಾನಿಸಲಾಗಿದೆ.
ಕೊಡಗು ಜಿಲ್ಲೆಯ ವೀರಾಜೆಪೇಟೆಯ ತಾಲೂಕಿನ ಕಡಂಗ ನಿವಾಸಿ, ಸದ್ಯ ಮೈಸೂರಿನ ಪಿ.ಎಸ್. ನಗರದಲ್ಲಿ ವಾಸವಿದ್ದ ಕವಿತಾ ಮಂದಣ್ಣ ಅವರು ಪುತ್ರಿ ಕಲ್ಪಿತಾ ಮಂದಣ್ಣ ಮತ್ತು ಕೌಶಿಕ್ ಮಂದಣ್ಣ ಹಾಗೂ ತಮ್ಮ ಸಾಕು ನಾಯಿನೊಂದಿಗೆ ಶನಿವಾರ ರಾತ್ರಿ 11:30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡಿನ ನೇತ್ರಾವತಿ ನದಿಗೆ ಹಾರಿ ಸಾಮೂಹಿಕ ಆತ್ಮಹತ್ಯೆಗೈದಿದ್ದಾರೆ. ಈ ವೇಳೆ ಈ ಪೈಕಿ ಕವಿತಾ ಅವರ ಮೃತದೇಹವು ಅಂದೇ ರಾತ್ರಿ ಪತ್ತೆಯಾದರೆ, ರವಿವಾರ ಮಧ್ಯಾಹ್ನದ ಹೊತ್ತಿಗೆ ಪುತ್ರಿ ಕಲ್ಪತಾ ಮಂದಣ್ಣ ಅವರ ಮೃತದೇಹವು ಕೊಣಾಜೆಯ ಇನೋಳಿಯಲ್ಲಿ ಪತ್ತೆಯಾಗಿತ್ತು. ಆದರೆ, ರವಿವಾರ ರಾತ್ರಿಯವೆರಗೂ ಕೌಶಿಕ್ ಅವರ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಈ ಬಗ್ಗೆ ಬಂಟ್ವಾಳ ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.