ಕೊಣಾಜೆ, ಸೆ 30 (DaijiworldNews/SM): ಕೊಣಾಜೆ ಠಾಣಾ ವ್ಯಾಪ್ತಿಯ ನಡುಪದವು ಕುಂಟಾಲಗುಳಿ ಎಂಬಲ್ಲಿ ಶಾಲಾ ಬಸ್ ಹಾಗೂ ಕಾಲೇಜು ಬಸ್ಸುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಮಂಗಳವಾರ ನಡೆದಿದೆ.
ಕೊಣಾಜೆ ಪಿ.ಎ.ಕಾಲೇಜು ವಾಹನ ಹಾಗೂ ನಾಟೆಕಲ್ ನ ಕುನಿಲ್ ಸ್ಕೂಲ್ ವಾಹನದ ನಡುವೆ ನಡುಪದವು ಕುಂಟಾಲಗುಳಿ ತಿರುವು ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಶಾಲಾ ಬಸ್ ನಲ್ಲಿದ್ದ ಐದು ಜನ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ಬಸ್ ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ.
ವೇಗದ ಚಾಲನೆ:
ನಡುಪದವು ಹಳೆ ರಸ್ತೆಯು ಇತ್ತೀಚೆಗಷ್ಟೇ ಕಾಂಕ್ರೀಟು ರಸ್ತೆಯಾಗಿ ಅಭಿವೃದ್ಧಿಗೊಂಡಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಇಲ್ಲಿ ಎರಡು ರಿಕ್ಷಾಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದಿದ್ದು, ಇದೀಗ ಶಾಲಾ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ.
ರಸ್ತೆ ಅಭಿವೃದ್ದಿಯ ನಂತರ ಈ ರಸ್ತೆಯಲ್ಲಿ ಶಾಲಾ, ಕಾಲೇಜು ವಾಹನಗಳು ಸೇರಿದಂತೆ ಬಹಳಷ್ಟು ವಾಹನಗಳು ಅತೀ ವೇಗವಾಗಿ ಸಂಚಾರ ನಡೆಸುತ್ತಿರುವುದೇ ಅವಘಡಕ್ಕೆ ಕಾರಣವಾಗುತ್ತಿದ್ದು, ವೇಗಕ್ಕೆ ಕಡಿವಾಣ ಹಾಕಲು ಕೂಡಲೇ ಹಂಪ್ಸ್ ನಿರ್ಮಾಣ ಮಾಡಬೇಕು ಹಾಗೂ ಶಾಲಾ ವಾಹನಗಳಿಗೂ ವೇಗದ ಮಿತಿ ಕಡ್ಡಾಯಗೊಳಿಸಬೇಕು ಎಂಬುದು ಸ್ಥಳೀಯರ ಅಭಿಪ್ರಾಯ ವಾಗಿದೆ.