ಕುಂದಾಪುರ, (Daijiworld News/MSP): ಅನಾರೋಗ್ಯಪೀಡಿತ ತಾಯಿಯನ್ನು ನಿರ್ಲಕ್ಷ್ಯ ಮಾಡಿದ್ದ ಪುತ್ರರಿಬ್ಬರಿಗೆ ಕುಂದಾಪುರದ ಜೆ.ಎಂಎಫ್ ಸಿ ನ್ಯಾಯಾಲಯ "ತಾಯಿಗೆ ಜೀವನಾಂಶ " ನೀಡುವಂತೆ ಮಧ್ಯಾಂತರ ಆದೇಶ ನೀಡಿದೆ. ಪ್ರತಿ ತಿಂಗಳು ಒಟ್ಟು 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಆದೇಶ ನೀಡಿದ್ದಾರೆ.
ಗೋಪಾಡಿ ನಿವಾಸಿ ರತ್ನಾವತಿ (65)ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಇವರ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇನ್ನು ಆರ್ಥಿಕವಾಗಿ ಅನುಕೂಲಸ್ಥರಾಗಿರುವ ಇಬ್ಬರು ಪುತ್ರರಾದ ರಾಘವೇಂದ್ರ ಹಾಗೂ ರವಿರಾಜ ಅವರು ತಾಯಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮಾತ್ರವಲ್ಲದೆ ದೈಹಿಕ ಹಾಗೂ ಮಾನಸಿಕವಾಗಿಯೂ ಹಿಂಸೆ ನೀಡುತ್ತಿದ್ದು ಇದರಿಂದ ಒಂಟಿಯಾಗಿರುವ ನನಗೆ ಜೀವನ ನಿರ್ವಹಣೆಯೂ ಕಷ್ಟವಾಗಿದೆ, ಮಕ್ಕಳಿಂದ ಜೀವನಾಂಶ ಕೊಡಿಸಬೇಕು ಎಂದು ಕುಂದಾಪುರ ಜೆ.ಎಂ ಎಫ್ ಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಜೆ.ಎಂಎಫ್ ಸಿ ನ್ಯಾಯಾಲಯದ ನ್ಯಾಯಧೀಶೆ ನಾಗರತ್ನಮ್ಮ ಇಬ್ಬರಿ ಮಕ್ಕಳು ತಲಾ 10 ಸಾವಿರದಂತೆ ತಿಂಗಳಿಗೆ 20 ಸಾವಿರ ರೂ ಜೀವನಾಂಶ ನೀಡುವಂತೆ ಮಧ್ಯಾಂತರ ಆದೇಶ ನೀಡಿದ್ದಾರೆ. ಸಂತ್ರಸ್ತರಾದ ರತ್ನಾವತಿ ಅವರ ಪರ ಕುಂದಾಪುರದ ನ್ಯಾಯವಾದಿ ಹಂದಕುಂದ ಆಶೋಕ್ ಶೆಟ್ಟಿ ವಾದಿಸಿದ್ದಾರೆ.