ಉಳ್ಳಾಲ ಜ 2: ಕೆಎಸ್ ಆರ್ ಟಿಸಿ ಬಸ್ಸು ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬ್ಲಪದವು ಅರ್ಕಾನ ಎಂಬಲ್ಲಿ ಜ ೧ ಸೋಮವಾರ ಸಂಭವಿಸಿದ್ದು, ಇನ್ಫೋಸಿಸ್ ಸಂಸ್ಥೆ ನಡೆಸಿರುವ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಸ್ಥಳೀಯರು ಮಂಗಳವಾರ ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನಿಟ್ಟು ಪ್ರತಿಭಟಿಸಿದ ಘಟನೆ ನಡೆಯಿತು.
ಸೋಮವಾರದಂದು ಅರ್ಕಾನ ನಿವಾಸಿ ಮೊಯ್ದೀನ್ ಕುಂಞಿ (52) ಮೃತಪಟ್ಟವರು. ಮನೆಯಿಂದ ಕುತ್ತಾರು ಕಡೆಗೆ ಕೆಲಸಕ್ಕೆಂದು ತೆರಳುವ ಸಂದರ್ಭ ಕಾಸರಗೋಡಿನಿಂದ ಬಿ.ಸಿರೋಡ್ ಕಡೆಗೆ ತೆರಳುತ್ತಿದ್ದ ಕೆಎಸ್ ಆರ್ಟಿಸಿ ಬಸ್ಸು ಢಿಕ್ಕಿ ಹೊಡೆದಿದೆ. ಎದುರುಗಡೆ ನಿಂತಿದ್ದ ಖಾಸಗಿ ಬಸ್ಸನ್ನು ಓವರ್ ಟೇಕ್ ನಡೆಸುವ ವೇಳೆ ರಸ್ತೆ ದಾಟುತ್ತಿದ್ದ ಮೊಯ್ದೀನ್ ಕುಂಞಿ ಅವರಿಗೆ ಸರಕಾರಿ ಬಸ್ಸು ಢಿಕ್ಕಿ ಹೊಡೆದ ಪರಿಣಾಮ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಮೂವರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ. ಕೂಲಿ ಕೆಲಸ ನಿರ್ವಹಿಸಿಕೊಂಡು ಕುಟುಂಬದ ಆಧಾರಸ್ತಂಭವಾಗಿದ್ದರು.
ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ
ಅರ್ಕಾಣ-ಕಂಬ್ಲಪದವು ರಸ್ತೆ ಅವೈಜ್ಞಾನಿಕವಾಗಿದ್ದು, ಇದರಿಂದ ಸ್ಥಳದಲ್ಲಿ ಅಪಘಾತ ಸಂಭವಿಸುತ್ತಲೇ ಇದ್ದು, ಸೋಮವಾರ ನಡೆದ ಅಪಘಾತದಲ್ಲಿ ಮೊದಲ ಜೀವ ಬಲಿಯಾಗಿದೆ. ಘಟನೆ ಸಂಬಂಧ ಕಾಮಗಾರಿ ನಡೆಸುತ್ತಿರುವ ಇನ್ಫೋಸಿಸ್ ಸಂಸ್ಥೆ ಮೃತರಿಗೆ ರೂ. 25 ಲಕ್ಷ ಪರಿಹಾರ ಧನವನ್ನು ನೀಡಬೇಕೆಂದು ಆಗ್ರಹಿಸಿ ಸ್ಥಳೀಯರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರ ವಾಹನಗಳು ಸಂಚರಿಸದಂತೆ ಹೊಸ ರಸ್ತೆಗೆ ಕಲ್ಲುಗಳನ್ನು ಅಡ್ಡ ಇಟ್ಟು ಪ್ರತಿಭಟಿಸಿ, ಸ್ಥಳೀಯರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲು ಆಗ್ರಹಿಸಿದರು. ಅರ್ಕಾಣ ಕ್ರಾಸ್ ನಿಂದ ಕಂಬ್ಲಪದವು ಮುಖ್ಯರಸ್ತೆಗೆ ಬರಲು ಈ ಹಿಂದೆ ಒಂದೇ ರಸ್ತೆಯಿದ್ದು, ನಿಗದಿತ ನಿಲ್ದಾಣದಲ್ಲಿ ಬಸ್ಸುಗಳು ನಿಲ್ಲುತಿತ್ತು. ಇದೀಗ ಇನ್ಫೋಸಿಸ್ ಸಂಸ್ಥೆ ಎದುರುಗಡೆ, ಸಂಸ್ಥೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವ ನಂತರ 4 ಫೀಟ್ ಎತ್ತರದಲ್ಲಿದ್ದ ರಸ್ತೆಯನ್ನು 12 ಫೀಟ್ ಗೆ ಏರಿಸಲಾಗಿದೆ. ಅರ್ಕಾಣದಿಂದ ಮುಖ್ಯರಸ್ತೆ ತಲುಪಲು ಮೂರು ರಸ್ತೆಗಳನ್ನು ತೆರೆಯಲಾಗಿದೆ. ಮುಖ್ಯರಸ್ತೆಯಲ್ಲಿ ಡಿವೈಡರ್ ಅಳವಡಿಸಲಾಗಿದ್ದು, ಮುಖ್ಯರಸ್ತೆ ಸೇರುವ ಎರಡು ರಸ್ತೆಗಳಲ್ಲಿ ಏಕಮುಖ ಸಂಚಾರದಲ್ಲಿ ವಾಹನ ಸವಾರರು ತೆರಳಬೇಕಾಗಿದೆ. ಈ ನಡುವೆ ಡಿವೈಡರ್ ತುಂಡರಿಸಿದ ಸ್ಥಳದಲ್ಲಿ ಮಂಗಳವಾರ ಅಪಘಾತ ಸಂಭವಿಸಿದೆ. ಅರ್ಕಾನ ಭಾಗದವರು ಹೊಸ ರಸ್ತೆಯಲ್ಲಿ ಬಂದು ರಸ್ತೆ ದಾಟುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿದೆ . ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಮತ್ತು ಮೃತರಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಇನ್ಫೋಸಿಸ್ ಸಂಸ್ಥೆಗೆ ಮನವಿಯನ್ನು ಸಲ್ಲಿಸಲಾಗುವುದು ಎಂದರು. ಮನವಿಗೆ ಸ್ಪಂದಿಸದೇ ಇದ್ದಲ್ಲಿ ಗ್ರಾಮಸ್ಥರು ಸೇರಿ ಸಂಸ್ಥೆಯ ಎದುರು ಉಗ್ರ ರೀತಿಯಲ್ಲಿ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದರು.
ಪ್ರತಿಭಟನೆ ನೇತೃತ್ವವನ್ನು ಪಜೀರು ಗ್ರಾ.ಪಂ ಸದಸ್ಯ ನಾಸಿರ್ ಮೊಯ್ದೀನ್ ಅರ್ಕಾಣ, ರಫೀಕ್ ಪಜೀರು ವಹಿಸಿದ್ದರು. ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿದರು.